ಮಂಗಳೂರು: ಸಿಟಿ ಸೆಂಟರ್ ಮಾಲ್ ನಲ್ಲಿ ಬೆಂಕಿ ಆಕಸ್ಮಿಕ, ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ
ಮಂಗಳೂರು: ಮಂಗಳೂರಿನ ಸಿಟಿ ಸೆಂಟರ್ ಮಾಲ್ ನಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಸಮಯಕ್ಕೆ ಸರಿಯಾಗಿ ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸಿದ ಕಾರಣ ಭಾರೀ ಪ್ರಮಾಣದ ಅವಘಡ ತಪ್ಪಿದೆ.
ಮಂಗಳೂರು ಕೆ.ಎಸ್.ರಾವ್ ರಸ್ತೆಯ ಸಿಟಿ ಸೆಂಟರ್ ಮಾಲ್ ನಲ್ಲಿ ಗುರುವಾರ ಬೆಳಿಗ್ಗೆ 11.30ರ ಸುಮಾರಿಗೆ ಬೆಂಕಿ ಅನಾಹುತ ಸಂಭವಿಸಿದೆ. ಕಟ್ಟಡದ ಐದನೇ ಮಹಡಿಯಲ್ಲಿರುವ ಫುಡ್ ಕೋರ್ಟ್ ನಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು ಅಲ್ಲಿನ ಸಿಬ್ಬಂದಿ ಪ್ರಯತ್ನಿಸಿದರೂ ಬೆಂಕಿಯ ಜ್ವಾಲೆ ಹೆಚ್ಚಾಗಿದ್ದ ಕಾರಣ ಅವರು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.
ತಕ್ಷಣ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸುಮಾರು ಮುಕ್ಕಾಲು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ತಹಬಂದಿಗೆ ತಂದಿದ್ದಾರೆ.
ಘಟನೆ ನಡೆದ ಮಾಲ್ ನಲ್ಲಿ ದಟ್ಟ ಹೊಗೆ ಆವರಿಸಿಕೊಂಡಿರುವ ಕಾರಣ ಸಾರ್ವಜನಿಕರನ್ನು ಹಾಗೂ ಮಾಲ್ ನ ಸಿಬ್ಬಂದಿಗಳನ್ನು ಮಾಲ್ ನಿಂದ ಹೊರಗೆ ಕರೆದೊಯ್ಯಲಾಗಿದೆ. ಅಲ್ಲದೆ ಇನ್ನೂ ಹೊಗೆ ಕಡಿಮೆಯಾಗಿಲ್ಲದ ಕಾರಣ ಸಾರ್ವಜನಿಕರಿಗೆ ಂಆಲ್ ಪ್ರವೇಶ ನಿರ್ಬಂಧಿಸಲಾಗಿದೆ.
ಬೆಂಕಿ ಅನಾಹುತ ಸಂಭವಿಸುವ ಸಮಯದಲ್ಲಿ ಮಾಲ್ ನೊಳಗೆ ಫುಡ್ ಕೋರ್ಟ್, ವ್ಯಾಪಾರಿ ಮಳಿಗೆ, ಸಿನಿಮಾ ಹಾಲ್ ಸೇರಿ ಹಲವೆಡೆ ಸಿಬ್ಬಂದಿಗಳ ಸಹಿತ 500ರಷ್ಟು ಜನರಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸಿನಿಮಾ ಹಾಲ್ ನಲ್ಲಿದ್ದವರನ್ನೂ ಸೇರಿಸಿ ಎಲ್ಲರನ್ನೂ ಹೊರಗೆ ಕರೆತರಲಾಗಿದೆ. ಹಾಗಾಗಿ ಯಾವುದೇ ಜೀವಹಾನಿ ಸಂಭಿಸಿಲ್ಲ ಎಂದು ವರದಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics