ರಾಜ್ಯ

ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ: ಶಾಸಕ ಕಂಪ್ಲಿ ಗಣೇಶ್ ಗೆ 14 ದಿನ ನ್ಯಾಯಾಂಗ ಬಂಧನ

Srinivas Rao BV
ರಾಮನಗರ: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಗೆ ರಾಮನಗರದ ಜೆಎಂಎಪ್ ಸಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.ಜಾಮೀನು ನಿರೀಕ್ಷೆಯಲ್ಲಿದ್ದ ಅವರು ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. 
ಕಳೆದೊಂದು ತಿಂಗಳಿಂದ ನಾಪತ್ತೆಯಾಗಿದ್ದ ಶಾಸಕ ಕಂಪ್ಲಿ ಗಣೇಶ್ ಅವರನ್ನು  ರಾಮನಗರ ಪೊಲೀಸರು ಗುಜರಾತಿನ ಸೋಮನಾಥ್ ನಲ್ಲಿ ಬಂಧಿಸಿ ಫೆ.21 ರಂದು ಬೆಳಗ್ಗೆ ಬೆಂಗಳೂರಿಗೆ ಕರೆತಂದರು.  ಏರ್ ಪೋರ್ಟ್‍ನಿಂದ ನೈಸ್ ರೋಡ್ ಮೂಲಕ ಬಿಡದಿ ಠಾಣೆಗೆ ಕರೆದೊಯ್ದು, ಕಾನೂನು ಪ್ರಕ್ರಿಯೆಗಳನ್ನು  ಮುಗಿಸಿ ಶಾಸಕರಿಂದ ಪೊಲೀಸರು ಹೇಳಿಕೆಯನ್ನು ದಾಖಲಿಸಿದರು ಎನ್ನಲಾಗಿದೆ. 
ಬಳಿಕ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಗಣೇಶ್ ಗೆ  ಬಿಪಿ, ಶುಗರ್, ಇಸಿಜೆ ಸೇರಿದಂತೆ ಹಲವು ವೈದ್ಯಕೀಯ ತಪಾಸಣೆ ನಡೆಸಲಾಯಿತು. ಬಳಿಕ ರಾಮನಗರ ಜೆಎಂಎಫ್ ಸಿ ಕೋರ್ಟ್ ಗೆ ಬಿಡದಿ ಪೊಲೀಸರು ಹಾಜರುಪಡಿಸಿದರು.ರಾಮನಗರ ಜೆಎಂಎಫ್ ಸಿ ಕೋರ್ಟ್ ಗೆ ಹಾಜರುಪಡಿಸುವ ಮುನ್ನವೇ ಆರೋಪಿಯನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಪೊಲೀಸರು ತೀರ್ಮಾನಿಸಿದ್ದರು.
ರಾಮನಗರ ಕೋರ್ಟ್ ಗೆ 4 ಗಂಟೆ ವೇಳೆಗೆ ಬಿಡದಿ ಪೊಲೀಸರು ಆರೋಪಿಯನ್ನು ಹಾಜರು ಪಡಿಸಿದರು.ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಲಯದ ನ್ಯಾಯಾಧೀಶೆ ಎಂ.ಅನಿತಾ ಆರೋಪಿ ಶಾಸಕನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದರು.
ಜೆಎಂಎಫ್ ಸಿ ನ್ಯಾಯಾಲಯದ ಆದೇಶದ ಪ್ರತಿ ಪಡೆದು ಆರೋಪಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.
ಘಟನೆ ಹಿನ್ನಲೆಯಲ್ಲಿ ಇಂದು ಗಣೇಶ್  ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ. ನಾಳೆ ಬೆಂಗಳೂರಿನ  ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಮನವಿ ಸಲ್ಲಿಸುವ ಸಾಧ್ಯತೆ ಇದೆ  ಎನ್ನಲಾಗಿದೆ.
SCROLL FOR NEXT