ವಾಯುಸೇನೆ ದಾಳಿಗೆ ರಾಜ್ಯ ನಾಯಕರ ಪ್ರತಿಕ್ರಿಯೆ
ಬೆಂಗಳೂರು: ಪುಲ್ವಾಮ ಉಗ್ರರದಾಳಿಗೆ ಪ್ರತೀಕಾರ ತೀರಿಸಿಕೊಂಡಿರಕುವ ಭಾರತೀಯ ಸೇನೆಯ ಪರಾಕ್ರಮಕ್ಕೆ ರಾಜ್ಯದ ಪ್ರಮುಖ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.
ಜೈಷೆ ಉಗ್ರ ಸಂಘಟನೆಯ ಬಾಲಕೋಟ್, ಚಕೋಟಿ, ಮುಜಾಫರ್ಬಾದ್‍ನಲ್ಲಿದ್ದ ನೆಲೆಗಳನ್ನು ಭಾರತೀಯ ಸೇನೆ ನಾಶ ಮಾಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸೈನಿಕರು ಶೂರರಾಗಿದ್ದು, ಅವರ ಶೌರ್ಯವನ್ನು ಗೌರವಿಸುವ ದಿನ ಇದಾಗಿದೆ. ಬಾಲಾಕೋಟ್‍ನಲ್ಲಿ ಜೈಷೆ ಉಗ್ರರ ಶಿಬಿರವನ್ನು ಭಾರತೀಯ ಸೈನಿಕರು ನಾಶ ಮಾಡಿದ್ದಾರೆ. ಇದು ಆಧುನಿಕ ಭಾರತ.. ಹೇಗಿದೆ ಸ್ಫೂರ್ತಿ..? ಎಂದು ಪ್ರಶಂಸಿಸಿ ಟ್ವೀಟ್ ಮಾಡಿದ್ದಾರೆ .
ಭಾರತೀಯ ವಾಯುಪಡೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವೈಮಾನಿಕ ದಾಳಿ ಮೂಲಕ ಉಗ್ರ ನೆಲೆಗಳನ್ನು ನಾಶ ಮಾಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹರ್ಷವ್ಯಕ್ತಪಡಿಸಿದ್ದಾರೆ. ಸರ್ಜಿಕಲ್ ಸ್ಟ್ರೈಕ್-2 ನಡೆಸುವ ಮೂಲಕ ಉಗ್ರರ ದಾಳಿಗೆ ಪ್ರತೀಕಾರ ನಡೆಸಿರುವುದಕ್ಕೆ ವಂದನೆಗಳನ್ನು ಅವರು ಸಲ್ಲಿಸಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ 2 ಹಿತ್ತಲಲ್ಲಿರುವ ಭಯೋತ್ಪಾದಕ ಗುಂಪುಗಳನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಪಾಕಿಸ್ತಾನಕ್ಕೆ ದೊಡ್ಡ ಪಾಠವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನ ಉಗ್ರ ನೆಲೆಗಳ ಮೇಲೆ ದಾಳಿ ಮಾಡುವ ಮೂಲಕ ಪಾಕ್‍ಗೆ ಎಚ್ಚರಿಕೆ ಸಂದೇಶ ರವಾನೆಯಾದಂತಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆತ್ಮಾಹುತಿ ದಾಳಿಯಿಂದ ನಮ್ಮ 40 ಯೋಧರನ್ನು ಕಳೆದುಕೊಂಡಿದ್ದಕ್ಕೆ ಪ್ರತಿಕಾರವಾಗಿ ಕೇಂದ್ರ ಸರ್ಕಾರ ಪಾಕ್ ಉಗ್ರರ ನೆಲೆ ಮೇಲೆ ದಾಳಿ ನಡೆಸಿರುವುದು ಅತ್ಯಂತ ಸೂಕ್ತವಾಗಿದೆ. ಭಾರತೀಯ ಸೇನೆಯ ದಾಳಿಯಲ್ಲಿ ಪಾಕಿಸ್ತಾನಲ್ಲಿ ಎಷ್ಟು ಉಗ್ರರು ಹತರಾಗಿದ್ದಾರೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.