ಬೆಂಗಳೂರು: 24 ಗಂಟೆಗಳಲ್ಲಿ ಕರಾಚಿ ಬೇಕರಿ ಹೆಸರು ಬದಲಿಸದಿದ್ದರೇ, ಬೇಕರಿಯನ್ನೇ ಧ್ವಂಸಗೊಳಿಸುವುದಾಗಿ ಬೆದರಿಕೆ ಕರೆ ಮಾಡಲಾಗಿದೆ.
ಭೂಗತಪಾತಕಿ ವಿಕ್ಕಿಶೆಟ್ಟಿ ಹೆಸರಿನಲ್ಲಿ ಬೇಕರಿ ವ್ಯವಸ್ಥಾಪಕ ಪಿ.ಸುಕುಮಾರ್ ಅವರಿಗೆ ಕರೆ ಮಾಡಿರುವ ವ್ಯಕ್ತಿ 24 ಗಂಟೆಯಲ್ಲಿ ಕರಾಚಿ ಬೋರ್ಡ್ ತೆಗೆಯದಿದ್ದರೆ ಬೇಕರಿ ಧ್ವಂಸ ಮಾಡಿ ಗುಂಡಿನ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ಬಗ್ಗೆ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಬೆದರಿಕೆ ಹಾಕಿದ ಧ್ವನಿಯ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.
ಪಿ.ಸುಕುಮಾರ್ ಅವರಿಗೆ ಇಂಟರ್‌ನೆಟ್ ಕರೆ ಬಂದಿತ್ತು. ಅವರು ಕರೆ ಸ್ವೀಕರಿಸಿದ ನಂತರ, 'ನೀನೇನಾ ಕರಾಚಿ ಬೇಕರಿ ಮಾಲೀಕ ?' ಎಂದು ಜೋರು ಧ್ವನಿಯಲ್ಲಿ ಮಾತನಾಡಿದ ವ್ಯಕ್ತಿ ತನ್ನನ್ನು ಭೂಗತಪಾತಕಿ ವಿಕ್ಕಿ ಶೆಟ್ಟಿ ಎಂದು ಪರಿಚಯಿಸಿಕೊಂಡಿದ್ದ. ಅದಕ್ಕೆ ಉತ್ತರಿಸಿದ ಸುಕುಮಾರ್ ನಾನು ಮಾಲೀಕನಲ್ಲ. ಮ್ಯಾನೇಜರ್ ಎಂದು ಉತ್ತರಿಸಿದ್ದ. ಏನಾದರೂ ಆಗಿರು ಮೊದಲು ಕರಾಚಿ ಹೆಸರು ಬದಲಾಯಿಸಬೇಕು. ನಿನಗೆ 24 ಗಂಟೆ ಕಾಲಾವಕಾಶ ಕೊಡುತ್ತೇನೆ. ಅಷ್ಟರಲ್ಲಿ ಹೆಸರು ಬದಲಾಯಿಸು, ಇಲ್ಲದಿದ್ದರೆ ಬೇಕರಿ ದ್ವಂಸ ಗೊಳಿಸಿ ಗುಂಡಿನ ದಾಳಿ ನಡೆಯುತ್ತದೆ ಎಂದು ಧಮ್ಕಿ ಹಾಕಿದ್ದಾನೆ. ಈ ಬಗ್ಗೆ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಕ್ಕಿ ಶೆಟ್ಟಿಯ ಧ್ವನಿಯನ್ನು ಖಾತ್ರಿಪಡಿಸುವಂತೆ ಕೋರಿ ಇಂದಿರಾನಗರ ಠಾಣೆ ಪೊಲೀಸರು ಸಿಐಡಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ವಿಕ್ಕಿ ಶೆಟ್ಟಿಗೆ ಕನ್ನಡ ಚೆನ್ನಾಗಿ ಬರುತ್ತದೆ. ಆದರೆ, ಹಿಂದಿಯಲ್ಲಿ ಬೆದರಿಕೆ ಹಾಕಲಾಗಿದೆ. ಆರೋಪಿ ಇಂಟರ್‌ನೆಟ್ ಕರೆ ಮಾಡಿರುವುದು ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದು ತನಿಖೆ ಮುಂದುವರಿದಿದ್ದು ಬೇಕರಿಗೆ ಭದ್ರತೆ ಒದಗಿಸಲಾಗಿದೆ.