ಬೆಂಗಳೂರು: ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲ್ಯಾಟ್ ಕೊಡುವುದಾಗಿ ಜಾಹಿರಾತು ನೀಡಿ ಸಾರ್ವಜನಿಕರಿಂದ ನೂರಾರು ಕೋಟಿ ಸಂಗ್ರಹಿಸಿ ವಂಚಿಸಿದ ಆರೋಪದ ಮೇಲೆ ಸಿಸಿಬಿ ಪೊಲೀಸರು ಸ್ಕೈಲೈನ್ ಕನ್‌ಸ್ಟ್ರಕ್ಷನ್ ಮತ್ತು ಹೌಸಿಂಗ್ ಲಿಮಿಟೆಡ್ ಮಾಲೀಕ ಅವಿನಾಶ್ ಪ್ರಭುನನ್ನು ಬಂಧಿಸಿದ್ದಾರೆ.
ಮಂಗಳೂರು ಮೂಲದ ಅವಿನಾಶ್, 20 ವರ್ಷಗಳಿಂದ ನಗರದಲ್ಲಿ ಹೌಸಿಂಗ್ ಉದ್ಯಮ ನಡೆಸುತ್ತಿದ್ದಾನೆ. ಲ್ಯಾವೆಲ್ಲೆ ರಸ್ತೆಯಲ್ಲಿ ಕಂಪನಿಯ ಕಚೇರಿ ಇದೆ. ಕಡಿಮೆ ಬೆಲೆಗೆ ಪ್ಲ್ಯಾಟ್ ಕೊಡುವುದಾಗಿ ಹೇಳಿ ಗ್ರಾಹಕರಿಂದ ಫ್ಲ್ಯಾಟ್ ಮೊತ್ತದ ಬಹುಪಾಲು ಹಣ ಪಡೆದ ಬಳಿಕ ವಂಚಿಸುತ್ತಿದ್ದ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.
ಗ್ರಾಹಕರಿಂದ ಹಣ ಪಡೆಯುವಾಗ ಪಾಯ ಹಾಕಿದ ಸ್ಥಳ ತೋರಿಸುತ್ತಿದ್ದ. ಗ್ರಾಹಕರಿಂದ ಶೇ.70 ರಿಂದ 90 ಹಣ ಕೈ ಸೇರುವವರೆಗೂ ಕೆಲವು ಮಹಡಿಗಳವರೆಗೂ ಮಾತ್ರ ನಿರ್ಮಾಣ ಕಾರ್ಯ ಮುಂದುವರಿಸಿ ಆ ನಂತರ ಏಕಾ ಏಕಿ ನಿರ್ಮಾಣ ಸ್ಥಗಿತಗೊಳಿಸಿದ್ದ. ಈ ಬಗ್ಗೆ ಕ್ರಿಸ್ಟೊಪರ್ರ್ ರೀಗಲ್ ಎನ್ನುವವರು ದೂರು ದಾಖಲಿಸಿದ್ದರು. ದೂರಿನ ಆಧಾರದಲ್ಲಿ ತನಿಖೆ ಕೈಗೊಂಡಾಗ 200 ಕ್ಕೂ ಹೆಚ್ಚು ಮಂದಿಗೆ ಮೋಸ ಆಗಿರುವ ಬಗ್ಗೆ ಸುಳಿವು ಸಿಕ್ಕಿತ್ತು. 100 ಕೋಟಿಗೂ ಅಧಿಕ ಮೊತ್ತದ ವಂಚನೆ ನಡೆದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಅವಿನಾಶ್ ಪ್ರಭು ತನ್ನ ಸಹೋದರ ಧೀರಜ್ ಪ್ರಭುನೊಂದಿಗೆ ಸೇರಿ ನಗರ ಹಾಗೂ ಮಂಗಳೂರಿನಲ್ಲಿ ನಾನಾ ಯೋಜನೆಗೆ ಚಾಲನೆ ನೀಡಿದ್ದ. ಹೊರಮಾವಿನಲ್ಲಿ ಸ್ಕೈಲೈನ್ ರಿಟ್ರೀಟ್, ಕೆ.ನಾರಾಯಣಪುರದಲ್ಲಿ ಸ್ಕೈಲೈನ್ ಔರಾ, ಹೆಣ್ಣೂರು ಮುಖ್ಯರಸ್ತೆಯಲ್ಲಿ ಸ್ಕೈಲೈನ್ ಅಕೇಶಿಯಾ , ರೇಸ್‌ಕೋರ್ಸ್ ರಸ್ತೆಯಲ್ಲಿ ಸ್ಕೈಲೈನ್ ವಿಲ್ಲಾ ಮಾರಿಯಾ, ಯಲಹಂಕ ಬಳಿ ಸ್ಕೈಲೈನ್ ವಾಟರ್ ಫ್ರಂಟ್ ಹಾಗೂ ಮಂಗಳೂರಿನಲ್ಲಿ ಸ್ಕೈಲೈನ್ ಬ್ಲೂಬೆರ್ರಿ ಮತ್ತು ಬೆಸ್ಟ್ ಹೌಸ್ ಎಂಬ ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಚಾಲನೆ ನೀಡಿದ್ದ.
ಗ್ರಾಹಕರಿಂದ ಹಣ ಸಂಗ್ರಹಿಸಿದ ಈತ ಪ್ರಾಜೆಕ್ಟ್ಗಳನ್ನು ಮುಂದುವರಿಸಲು ತನ್ನ ಬಳಿ ಹಣ ಇಲ್ಲ ಎಂದು ಸಬೂಬು ಹೇಳುತ್ತಿದ್ದದ್ದಲ್ಲದೆ, ಪ್ಲ್ಯಾಟ್‌ಗಳನ್ನು ನೀಡುವ ದಿನಾಂಕವನ್ನು ವರ್ಷದಿಂದ ವರ್ಷಕ್ಕೆ ಮುಂದೂಡುತ್ತಲೇ ಇದ್ದ. ಆದರೆ, ಈತ ಸಂಗ್ರಹಿಸಿದ ಹಣವನ್ನು ಬೇರೆ ಬೇರೆ ಹೂಡಿಕೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಆರೋಪಿ ಕನಕಪುರ ಬಳಿ 7 ಎಕರೆ, ಮಂಗಳೂರಿನಲ್ಲಿ 8.5 ಎಕರೆ, ಚೆನ್ನೈನ ನೆಲ್ಸನ್ ಮಾಣಿಕ್ಯಂ ರಸ್ತೆಯಲ್ಲಿ ಅರ್ಧ ಎಕರೆ, ಕೆಂಗೇರಿಯಲ್ಲಿ 5 ಎಕರೆ, ಅಲ್ಲಾಲಳಸಂದ್ರ ಹಾಗೂ ಹೆಣ್ಣೂರು ಬಳಿ ತಲಾ 3 ಎಕರೆ ಹಾಗೂ ನಾನಾ ರಾಜ್ಯಗಳಲ್ಲಿ ಹಲವು ಕಡೆ ಹಣ ಹೂಡಿಕೆ ಮಾಡಿದ್ದಾನೆ. ಬೆಂಗಳೂರಿನ ವಿವಿಧೆಡೆ 11 ಕಲ್ಮನೆ ಕಾಫಿ ಔಟ್‌ಲೆಟ್‌ಗಳ ಮೇಲೆ ಅಕ್ರಮವಾಗಿ ಹಣ ಹೂಡಿಕೆ ಮಾಡಿದ್ದ. ಕಲ್ಮನೆ ಕಾಫಿ ಔಟ್‌ಲೆಟ್‌ಗೆ ಆರೋಪಿ ಅವಿನಾಶ್ ಪ್ರಭುನೇ ವ್ಯವಸ್ಥಾಪಕ ನಿರ್ದೇಶಕನಾಗಿರುವುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos