ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಹಾಡಹಗಲೇ ವಿಕೃತಕಾಮಿಯೊಬ್ಬ ಮಹಿಳೆಯೊಬ್ಬರ ಮನೆ ಬಾಗಿಲು ಬಡಿದಿದ್ದು, ಬಾಗಿಲು ತೆಗೆಯುತ್ತಿದ್ದಂತೆಯೇ ಆಕೆಯ ಮೇಲೆ ಕೈ ಹಾಕಿ ರೂಮಿಗೆ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ.
ಬೆಂಗಳೂರಿನ ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಡೇದ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಇದೇಜನವರಿ 16ರಂದು ಅಂದರೆ ಕಳೆದ ಬುಧವಾರ ಮಧ್ಯಾಹ್ನದ ಸಮಯದಲ್ಲಿ ಸುಮಾರು 30 ವರ್ಷದ ಮಹಿಳೆಯೊಬ್ಬರ ಮೇಲೆ ವಿಕೃತಕಾಮಿ ನಾಗರಾಜ್ ಅತ್ಯಾಚಾರವೆಸಗಿ, ಕೊಲೆಗೆ ಯತ್ನಿಸಿದ್ದಾನೆ.
ಮೂಲಗಳ ಪ್ರಕಾರ ಬುಧವಾರ ಮಧ್ಮಾಹ್ನ ಬೆಂಗಳೂರಿನ ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಡೇದ ಹಳ್ಳಿಯಲ್ಲಿರುವ ಮಹಿಳೆಯ ಮನೆ ಬಾಗಿಲು ಬಡಿದಿರುವ ನಾಗರಾಜ್, ಆಕೆ ಬಾಗಿಲು ತೆಗೆಯುತ್ತಿದ್ದಂತೆಯೇ ಆಕೆಯ ಮೇಲೆ ಕೈ ಹಾಕಿದ್ದಾನೆ. ಅಲ್ಲಿ ಏನಾಗುತ್ತಿದೆ ಎಂದು ಅರಿಯುವಷ್ಟರಲ್ಲಿಯೇ ಆಕೆಯನ್ನು ಮನೆಯ ರೂಮಿಗೆ ಎಳೆದುಕೊಂಡು ಹೋದ ವಿಕೃತ ಕಾಮಿ ನಾಗರಾಜ್, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಕಾಮುಕನಿಂದ ತಪ್ಪಿಸಿಕೊಳ್ಳಲು ಮಹಿಳೆ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆಯಾದರೂ, ವಿರೋಧ ವ್ಯಕ್ತಪಡಿಸಿದ ಮಹಿಳೆಗೆ ನಾಗರಾಜ್ ಕೈಗೆ ಸಿಕ್ಕ ವಸ್ತುಗಳಿಂದ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾನೆ. ಕೊನೆಗೆ ಜೀವ ಉಳಿಸಿಕೊಳ್ಳುವುದಕ್ಕೆ ಮನೆಯ ಮೂಲೆಯಲ್ಲಿದ್ದ ಬಾತ್ ರೂಮ್ ಒಳಗೆ ಬಾಗಿಲು ಹಾಕಿಕೊಂಡ ಮಹಿಳೆ ಸಹಾಯಕ್ಕಾಗಿ ಜೋರಾಗಿ ಕೂಗಿಕೊಂಡಿದ್ದಾಳೆ. ಅಷ್ಟರಲ್ಲಿ ನಾಗರಾಜ್ ಮಹಿಳೆಯ ಮನೆಯಲ್ಲಿದ್ದ ಚಿನ್ನಾಭರಣ, ಕೆಲ ವಸ್ತುಗಳನ್ನು ದೋಚಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಅಷ್ಟು ಹೊತ್ತಿಗಾಗಲೇ ಮಹಿಳೆ ಕೂಗಾಟ ಕೇಳಿದ ಅಕ್ಕಪಕ್ಕದ ಮನೆಯವರು ಮತ್ತು ದಾರಿಹೋಕರು ಮನೆ ಸುತ್ತುವರೆದಿದ್ದು, ವಿಕೃತ ಕಾಮಿ ನಾಗರಾಜ್ ನನ್ನು ಹಿಡಿದು ಥಳಿಸಿದ್ದಾರೆ.
ಅಲ್ಲದೆ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿ ಪೊಲೀಸರು ಬಂದ ಕೂಡಲೇ ಆತನನ್ನು ಅವರಿಗೆ ಒಪ್ಪಿಸಿದ್ದಾರೆ. ಸೈಕೋಪಾತ್ ನಾಗರಾಜ್ ನನ್ನು ವಶಕ್ಕೆ ಪಡೆದಿದ್ದು, ಆತನ ವಿರುದ್ಧ ಅತ್ಯಾಚಾರ, ಹಲ್ಲೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics