ತುಮಕೂರು: ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಕರ್ತವ್ಯ ನಿರತ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(ಎಸ್‍ಪಿ) ದಿವ್ಯಾ ಗೋಪಿನಾಥ್ ಅವರಿಗೆ ಅವಾಜ್ ಹಾಕಿದ್ದು, ನೊಂದ ಮಹಿಳಾ ಅಧಿಕಾರಿ ಕಣ್ಣೀರು ಹಾಕಿದ ವಿಡಿಯೋ ಇದೀಗ ವೈರಲ್ ಆಗಿದೆ.
ಕಳೆದ ಸೋಮವಾರ ಲಿಂಗೈಕ್ಯರಾದ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ಕ್ರಿಯಾ ಸಮಾಧಿಯ ವಿಧಿವಿಧಾನ ವೀಕ್ಷಿಸಲು ಸಾ.ರಾ. ಮಹೇಶ್ ಗದ್ದುಗೆ ಪ್ರವೇಶಿಸಲು ಮುಂದಾಗಿದ್ದಾರೆ. ಈ ವೇಳೆ ಪ್ರವೇಶ ನಿರಾಕರಿಸಿದ್ದಕ್ಕೆ ಎಸ್‍ಪಿ ದಿವ್ಯಾ ಗೋಪಿನಾಥ್ ಮತ್ತು ಸಾ.ರಾ.ಮಹೇಶ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೋಪಗೊಂಡ ಸಚಿವರು ಗದರಿದ್ದರಿಂದ ಎಸ್‍ಪಿ ಕಣ್ಣೀರು ಹಾಕಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಚಿವ ಸಾ.ರಾ.ಮಹೇಶ್ ಅವರು, ನಾನು ಮಂತ್ರಿ ಎಂದು ಹೇಳಿದರೂ ನನ್ನನ್ನು ತಡೆದರು. ಕೆಲವು ಅಧಿಕಾರಿಗಳಿಗೆ ಮಂತ್ರಿಗಳು ಯಾರು ಎನ್ನುವುದೇ ಗೊತ್ತಿರಲಿಲ್ಲ. ಹಾಗಾಗಿ ನಾವೇ ನಮ್ಮನ್ನು ಅವರಿಗೆ ಪರಿಚಯಿಸಿಕೊಳ್ಳುತ್ತೇವೆ. ನನ್ನ ಹಿಂದೆ ಬಂದ ಸಚಿವ ವೆಂಕಟರಾವ್ ನಾಡಗೌಡರು ಬಂದಾಗ ಇದೇ ಎಸ್‍ಪಿ ತಡೆದಿದ್ದರು. ನಾಡಗೌಡರೂ ನಾನು ಮಂತ್ರಿ ಇದ್ದೇನಮ್ಮಾ, ಒಳಗೆ ಹೋಗಲು ಬಿಡಿ. ಶ್ರೀಗಳ ದರ್ಶನ ಪಡೆದು ಹಿಂದಿರುಗುತ್ತೇನೆಂದು ಮನವಿ ಮಾಡಿಕೊಂಡಿದ್ದರು ಎಂದರು.
ಅದೊಂದು ಧಾರ್ಮಿಕ ಕೆಲಸವಾಗಿದ್ದರಿಂದ ನಾನು ಹೆಚ್ಚು ಮಾತನಾಡಲಿಲ್ಲ. ಈ ವೇಳೆ ನಾನು ಅವರಿಗೆ ಯಾವುದೇ ಕೆಟ್ಟ ಪದಗಳಿಂದಲೂ ನಿಂದಿಸಿಲ್ಲ. ದಾರಿ ಬಿಡಿ ಎಂಬುವುದನ್ನು ಎತ್ತರದ ಧ್ವನಿಯಲ್ಲಿ ಹೇಳಿದ್ದೇನೆ. ಯೂಸ್‍ಲೆಸ್ ತರಹ ಮಾತನಾಡಿ, ನ್ಯೂಸ್‍ಸೆನ್ಸ್ ಕ್ರಿಯೇಟ್ ಮಾಡಬೇಡಿ ಅಂತಾ ಹೇಳಿದ್ದೇನೆ. ಅಧಿಕಾರಿಗಳು ತಪ್ಪು ಮಾಡಿದಾಗ ಅವರಿಗೆ ಸಚಿವರು ಏನು ಹೇಳಬಾರದಾ? ಆ ಕ್ಷಣದಲ್ಲಿ ನಡೆದ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಹೇಳಿದ್ದೇನೆ. ನನ್ನ ಹೇಳಿಕೆಗೆ ಯಾವುದೇ ಕ್ಷಮೆ ಕೇಳಲ್ಲ ಮತ್ತು ವಿಷಾದ ವ್ಯಕ್ತಪಡಿಸಲ್ಲ ಎಂದು ಸಾ.ರಾ.ಮಹೇಶ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.