ಸುಳ್ವಾಡಿ ಆಯ್ತು ಈಗ ಚಿಂತಾಮಣಿ ಸರದಿ: ಪ್ರಸಾದ ಸೇವಿಸಿದ ಮಹಿಳೆ ಸಾವು, 6 ಮಂದಿ ಅಸ್ವಸ್ಥ!
ಚಿಂತಾಮಣಿ: ಸುಳ್ವಾಡಿ ಕಿಚ್ಚುಗುತ್ ಮಾರಮ್ಮ ದೇವಸ್ಥಾನದ ಪ್ರಸಾದ ಸೇವಿಸಿ 17 ಮಂದಿ ಸಾವನ್ನಪ್ಪಿರುವ ಘಟನೆ ನೆನಪಿನಿಂದ ಮಾಸುವ ಮುನ್ನವೇ ಚಿಕ್ಕಬಳ್ಲಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಸಹ ಅಂತಹದೇ ಘಟನೆ ನಡೆದಿದೆ.
ಚಿಂತಾಮಣಿಯ ನರಸಿಂಹ ಪೇಟೆ ಗಂಗಮ್ಮನ ಗುಡಿ ಪ್ರಸಾದ ಸೇವಿಸಿದ ಕವಿತಾ(28 ಎಂಬ ಮಹಿಳೆ ಮೃತಪಟ್ಟು ಇನ್ನೂ 6 ಮಂದಿ ಭಕ್ತರು ಅಸ್ವಸ್ಥರಾಗಿದ್ದಾರೆ.
ಶುಕ್ರವಾರ ವಿಶೇಷ ಪೂಜಾ ಕೈಂಕರ್ಯದ ಕಾರಣ ಹಲ್ವಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದು ಈ ವೇಳೆ ದೇವಸ್ಥಾನದಲ್ಲಿ ನೀಡಲಾದ ಪ್ರಸಾದ (ಸ್ವೀಟ್ ಪೊಂಗಲ್) ಸೇವಿಸಿ ಕವಿತಾ ಸೇರಿ ಹಲವರು ಅಸ್ವಸ್ಥರಾಗಿದ್ದಾರೆ. ಹಲವು ಮಂದಿಗೆ ವಾಂತಿಯಾಗಿದ್ದು ತಕ್ಷಣ ಎಲ್ಲರನ್ನೂ ಚಿಂತಾಮಣಿಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ ಚಿಕಿತ್ಸೆ ಫಲನೀಡದ ಕಾರಣ ಕವಿತಾ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ.ಇನ್ನು ಪ್ರಸಾದ ಸೇವನೆ ಮಾಡಿದ ಬಳಿಕವೇ ಎಲ್ಲರೂ ಅಸ್ವಸ್ಥರಾಗಿದ್ದರು ಎಂದು ಅಸ್ವಸ್ಥರಾಗಿರುವ ಭಕ್ತರ ಕುಟುಂಬದವರು ಆರೋಪಿಸಿದ್ದಾರೆ.ಆದರೆ ದೇವಸ್ಥಾನದಲ್ಲಿ 100-150 ಜನ ಪ್ರಸಾದ ಸೇವಿಸಿದ್ದಾರೆ.ಆದರೆ ಈ ಏಳೆಂಟು ಜನಗಳಿಗೆ ಮಾತ್ರವೇ ಹೇಗೆ ವಿಷ ಸಿಕ್ಕಿದೆ ಎನ್ನುವ ಬಗ್ಗೆ ತನಿಖೆಯಿಂದಷ್ಟೇ ವಿವರ ತಿಳಿಯಬೇಕಿದೆ.
ಘಟನೆ ಕುರಿತು ಚಿಂತಾಮಣಿ ನಗರ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ದೇವಸ್ಥಾನದ ಅರ್ಚಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.