ಕಾಂಗ್ರೆಸ್ ತನಿಖಾ ಸಮಿತಿಯಿಂದ ಆನಂದ್ ಸಿಂಗ್ ಭೇಟಿ
ಬೆಂಗಳೂರು: ಈಗಲ್ಟನ್ ರೆಸಾರ್ಟ್ ನಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಶಾಸಕ ಗಣೇಶ್ ನಡೆಸಿದ ಹಲ್ಲೆಯಿಂದ ಒಂದು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷದ ತನಿಖಾ ತಂಡ ಭಾನುವಾರ ಭೇಟಿ ಮಾಡಿದೆ. ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೆಗೌಡ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ.
ಘಟನೆ ಕುರಿತಂತೆ ಸಂಪೂರ್ಣ ತನಿಖೆ ನಡೆಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ್ಂದ ರಚಿಸಲ್ಪಟ್ಟ ಪಕ್ಷದ ಆಂತರಿಕ ತನಿಖಾ ತಂಡ ವಾರದ ಬಳಿಕ ಆನಂದ್ ಸಿಂಗ್ ಅವರ ಭೇಟಿ ಮಾಡಿದೆ. ಘಟನೆಯ ಕುರಿತು ವಿಚಾರಣೆಯ ಪ್ರಕ್ರಿಯೆ ಇನ್ನಷ್ಟೇ ಪ್ರಾರಂಭವಾಗಬೇಕಿದೆ. ಆನಂದ್ ಸಿಂಗ್ ಅವರ ಮೇಲೆ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ಸಿಂಗ್ ಅವರ ಕಣ್ಣು ಹಾಗೂ ಪಕ್ಕೆಲುಬುಗಳಿಗೆ ಗಂಭೀರ ಗಾಯವಾಗಿದೆ.
ನಾವು ಅವರ ಆರೋಗ್ಯದ ಕುರಿತು ವಿಚಾರಿಸಲಷ್ಟೇ ಆಸ್ಪತ್ರೆಗೆ ತೆರಳಿದ್ದೆವು.ಈ ವಿವಾದದ ಕುರಿತ ವಿಚಾರಣೆ ಇನ್ನಷ್ಟೇ ಪ್ರಾರಂಭವಾಗಬೇಕಿದೆ. ತನಿಖಾ ಸಮಿತಿಯ ಸದಸ್ಯರಲ್ಲೊಬ್ಬರಾದ ಕೆ.ಜೆ. ಜಾರ್ಜ್ ಚಿಕ್ಕಮಗಳೂರಿಗೆ ತೆರಳಿದ್ದು ಅವರು ಹಿಂತಿರುಗಿದ ಬಳಿಕ ಎಲ್ಲ ಸದಸ್ಯರೂ ಒಟ್ಟಾಗಿ ನಾವು ಮತ್ತೆ ಆನಂದ್ ಸಿಂಗ್ ಅವರನ್ನು ಕಾಣುತ್ತೇವೆ" ಕೃಷ್ಣ ಬೈರೆಗೌಡ ಹೇಳಿದರು.
ಸಿಂಗ್ ಅವರ ಆರೋಗ್ಯಸ್ಥಿತಿ ಸುಧಾರಿಸಿದೆ.ಎರಡು ಅಥವಾ ಮೂರು ದಿನಗಳವರೆಗೆ ಆಸ್ಪತ್ರೆಯಲ್ಲಿದ್ದು ಶಾಸಕರು ಇನ್ನಷ್ಟು ಚೇತರಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.ಮುಖದ ಮೇಲಿನ ಊತ ಬಹಳವೇ ಕಡಿಮೆಯಾಗಿದೆ, ಆದರೆ ಕಣ್ಣಿನ ಗಾಯ ವಾಸಿಯಾಗಲು ಇನ್ನಷ್ಟು ಕಾಲಾವಕಾಶ ಬೇಕು ಎಂದು ವೈದ್ಯರು ಹೇಳಿದ್ದಾರೆ.