ರಾಜ್ಯ

ಭರವಸೆ ನೀಡಿ ವರ್ಷದ ಬಳಿಕ ಕೊನೆಗೂ ಪದವಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ 'ಲ್ಯಾಪ್ ಟಾಪ್ ಭಾಗ್ಯ'!

Manjula VN
ಬೆಂಗಳೂರು: ವರ್ಷಗಳ ಹಿಂದೆ ನಿರೀಕ್ಷಿಸಿದ್ದ ಉಚಿತ ಲ್ಯಾಪ್'ಟಾಪ್ ಭಾಗ್ಯ ಯೋಜನೆ ಕೊನೆಗೂ ಕೈಗೂಡುವ ಸಮಯ ಬಂದಿದ್ದು, ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ ಪದವಿ ವಿದ್ಯಾರ್ಥಿಗಳಿಗೆ ಶೀಘ್ರದಲ್ಲಿಯೇ ಲ್ಯಾಪ್'ಟಾಪ್ ವಿತರಿಸುವುದಾಗಿ ಸರ್ಕಾರ ತಿಳಿಸಿದೆ. 
ಕಳೆದ ವರ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಚಿತ ಲ್ಯಾಪ್ ಟಾಪ್ ಯೋಜನೆ ಘೋಷಣೆ ಮಾಡಿದ್ದರು. ಆದರೆ, ಆರ್ಥಿಕ ಕೊರತೆಯಿಂದಾಗಿ ಯೋಜನೆ ಜಾರಿಗೆ ತರಲು ಸಾಧ್ಯವಾಗಿರಲಿಲ್ಲ.
ಇದೀಗ ಈ ಯೋಜನೆಯನ್ನು ಮೈತ್ರಿ ಸರ್ಕಾರ ಮುಂದುವರೆಸುತ್ತಿದ್ದು, ಶೀಘ್ರದಲ್ಲಿಯೇ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಗಳನ್ನು ವಿತರಿಸಲಿದೆ. ಯೋಜನೆ ಜಾರಿಗೆ ತರಲು ಕಾಲೇಜು ಶಿಕ್ಷಣ ಇಲಾಖೆ ಈಗಾಗಲೇ ಲ್ಯಾಪ್ ಟಾಪ್ ಗಳ ತಯಾರಿಕೆಗೆ ಗುತ್ತಿಗೆ ಕರೆದಿದೆ ಎಂದು ವರದಿಗಳು ತಿಳಿಸಿವೆ. 
ಕಳೆದ ವರ್ಷವೇ ಲ್ಯಾಪ್ ಟಾಪ್ ಗಳು ವಿದ್ಯಾರ್ಥಿಗಳ ಕೈ ಸೇರಬೇಕಿತ್ತು. ಆದರೆ, ಆರ್ಥಿಕ ಕೊರತೆಯಿಂದಾಗಿ ಅದು ಸಾಧ್ಯವಾಗಲಿಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆ ಹೇಳಿದೆ. 
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಯೇ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗಳನ್ನು ವಿತರಿಸಲು ಸರ್ಕಾರ ನಿರ್ಧರಿಸಿದೆ. ಈ ಕುರಿತಂತೆ ಹೇಳಿಕೆ ನೀಡಿರುವ ರಾಜ್ಯ ಹೆಚ್ಚುವರಿ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು, ಯೋಜನೆಗೆ ನಮ್ಮ ಬಳಿ ಕೇವಲ ರೂ.90 ಕೋಟಿ ಇದೆ. ಇನ್ನೂ ರೂ.280 ಕೋಟಿ ಅಗತ್ಯವಿದೆ. ಯೋಜನೆ ಜಾರಿಗಿರುವ ಆರ್ಥಿಕ ಕೊರತೆ ಕುರಿತು ಈಗಾಗಲೇ ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗುತ್ತದೆ ಎಂದು ಹೇಳಿದ್ದಾರೆ. 
ಲ್ಯಾಪ್ ಟಾಪ್ ತಯಾರಿಕೆಗೆ ಗುತ್ತಿಗೆ ಕರೆಯಲಾಗಿದ್ದು, ಗುತ್ತಿಗೆಯಲ್ಲಿ ಪಾಲ್ಗೊಳ್ಳಲು 30 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
ಉಚಿತ ಲ್ಯಾಪ್ ಟಾಪ್ ಭಾಗ್ಯ ಈ ಹಿಂದೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರವೇ ಮೀಸಲಾಗಿತ್ತು. ಆದರೆ, 2017-18ನೇ ಸಾಲಿನಲ್ಲಿ ಸಿದ್ದರಾಮಯ್ಯ ಅವರು ಯೋಜನೆಯನ್ನು ಎಲ್ಲಾ ವಿದ್ಯಾರ್ಥಿಗಳಿಗೂ ವಿಸ್ತರಿಸಿದ್ದರು. ಯೋಜನೆಯಡಿಯಲ್ಲಿ 1.5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಗಳನ್ನು ವಿತರಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ. 
SCROLL FOR NEXT