ರಾಜ್ಯ

ಚಾಮರಾಜನಗರ: ಆರ್ ಎಫ್ ಒ ಮೇಲೆ ಹುಲಿ ದಾಳಿ

Nagaraja AB
ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಳ್ಳೀಪುರದ ಕಾಡಂಚಿನಲ್ಲಿ ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ- ಆರ್ ಎಫ್ ಒ ಮೇಲೆ ಹುಲಿಯೊಂದು ದಾಳಿ ಮಾಡಿದೆ.
 ಆರ್ ಎಫ್ ಒ  ರಾಘವೇಂದ್ರ  ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಹುಲಿಯು ರಾಘವೇಂದ್ರ ಅವರ ಎಡ ಹಾಗೂ ಬಲ ಕಾಲುಗಳನ್ನು ಪರಚಿದ್ದು, ಎಡ ತೊಡೆಯನ್ನು ಕಚ್ಚಿದೆ.  
 ಕಳ್ಳೀಪುರ ಗ್ರಾಮದ ರೈತರೊಬ್ಬರ ಜಮೀನಿಗೆ ಹುಲಿ ಬಂದಿದೆ ಎಂದು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಪರಿಶೀಲನೆಗಾಗಿ ರಾಘವೇಂದ್ರ ಅವರು ಸಿಬ್ಬಂದಿ ಬಸವರಾಜು ಅವರೊಂದಿಗೆ ಸ್ಥಳಕ್ಕೆ ತೆರಳಿದ್ದರು.
 ಹುಲಿಯ ಹೆಜ್ಜೆ ಗುರುತುಗಳಿವೆಯೇ ಎಂದು ಪರಿಶೀಲನೆ ನಡೆಸುತ್ತಿದ್ದಾಗ ಅಲ್ಲೇ ಅವಿತಿದ್ದ ಹುಲಿ  ರಾಘವೇಂದ್ರ ಅವರ ಮೇಲೆ ಎರಗಿದೆ. ಜೊತೆಗಿದ್ದ ಸಿಬ್ಬಂದಿ ಹಾಗೂ ಸ್ಥಳೀಯರು ಜೋರಾಗಿ ಕೂಗಿದಾಗ ಬೆದರಿ ಓಡಿ ಹೋಗಿದೆ. ಅವರಿಗೆ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದು ಆಕಸ್ಮಿಕ ಘಟನೆ . ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಹುಲಿಯು ಆರ್ ಎಫ್ ಒ ಮೇಲೆ ಹಾರಿದೆ. ಅವರ ಪ್ರಾಣಕ್ಕೆ ಅಪಾಯವಿಲ್ಲ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ. ಬಾಲಚಂದ್ರ ತಿಳಿಸಿದ್ದಾರೆ.
 ಫೆಬ್ರವರಿಯಲ್ಲಿ ಹಂಗಳ ಗ್ರಾಮದ ಜಮೀನಿನಲ್ಲಿ ಅರಣ್ಯ ವೀಕ್ಷಕ ರಾಮು ಮೇಲೆ ಹುಲಿ ಎರಗಿತ್ತು. ಈ ಸಂದರ್ಭದಲ್ಲಿ ಅವರ ಬಲಗೈ ತೋಳಿನ ಮಾಂಸ ಕಿತ್ತು ಬಂದಿತ್ತು.
SCROLL FOR NEXT