ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನ
ಮೈಸೂರು: ಚಾಮರಾಜನಗರ ಜಿಲ್ಲೆಯ ಸುಳವಾಡಿ ದೇವಸ್ಥಾನದ ಪ್ರಸಾದ ಸೇವಿಸಿ 17 ಭಕ್ತರು ಮೃತಪಟ್ಟ ಘಟನೆ ನಂತರ ಮೈಸೂರು ಜಿಲ್ಲಾಡಳಿತ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಚಾಮುಂಡಿ ಬೆಟ್ಟದಲ್ಲಿ ಇದೇ ಶುಕ್ರವಾರ ಆಷಾಢ ಮಾಸದ ಮೊದಲ ಪೂಜೆ ನಡೆಯಲಿದ್ದು ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಹಂಚುವ ಪ್ರಸಾದದ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಿದೆ.
ಚಾಮುಂಡಿ ಬೆಟ್ಟದ ನಿಗದಿತ ಪ್ರದೇಶಗಳಲ್ಲಿ ಪ್ರಸಾದ ವಿತರಿಸಲು ಬಳಸುವ ವಾಹನಗಳು ಕಡ್ಡಾಯವಾಗಿ ಪಾಸ್ ಪಡೆದಿರಬೇಕು. ಅಲ್ಲದೆ ಪ್ರಸಾದ ವಿತರಿಸಲು ಇಚ್ಛಿಸುವ ಭಕ್ತಾದಿಗಳು ಕಡ್ಡಾಯವಾಗಿ ಜಿಲ್ಲಾಡಳಿತದಿಂದ ಅನುಮತಿ ಪಡೆದಿರಬೇಕು. ಚಾಮುಂಡೇಶ್ವರ ಬೆಟ್ಟದ ತುದಿಯಲ್ಲಿ ಆಷಾಢ ಶುಕ್ರವಾರ ಪೂಜಾ ಮಹೋತ್ಸವ ಜುಲೈ 5ರಿಂದ ಜುಲೈ 26ರವರೆಗೆ ನೆರವೇರಲಿದೆ.
ಈ ಮಧ್ಯೆ ಮುಖ್ಯ ದೇವತೆಯ ವರ್ಧಂತಿ ಉತ್ಸವ ಇದೇ 24ರಂದು ನೆರವೇರಲಿದೆ. ಬೆಟ್ಟದ ತುದಿಗೆ ಪ್ರಸಾದ ಸಾಗಿಸುವ ವಾಹನಗಳಿಗೆ ಪಾಸ್ ವಿತರಣೆ ಮಾಡಲಾಗುತ್ತದೆ. ನಿಗದಿತ ಸಮಯದಲ್ಲಿ ಮಾತ್ರ ಭಕ್ತರಿಗೆ ಪ್ರಸಾದ ವಿತರಣೆ ಮಾಡಬೇಕಾಗಿದ್ದು ಮೊದಲು ಮತ್ತು ತಡವಾಗಿ ಬರುವವರನ್ನು ಒಳಗೆ ಬಿಡುವುದಿಲ್ಲ. ಇದಕ್ಕೂ ಮುನ್ನ ಫುಡ್ ಇನ್ಸ್ ಪೆಕ್ಟರ್ ಆಹಾರವನ್ನು ತಪಾಸಣೆ ನಡೆಸಿದ ಬಳಿಕವಷ್ಟೆ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ವಿತರಿಸಲು ಅವಕಾಶ ನೀಡಲಾಗುತ್ತದೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಕೆ ಟಿ ಬಾಲಕೃಷ್ಣ, ಜುಲೈ 4ರಿಂದ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುತ್ತೇವೆ. ಅವರು ಮೂರು ಶಿಫ್ಟ್ ಗಳಲ್ಲಿ ಕೆಲಸ ಮಾಡುತ್ತಾರೆ. ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದ್ದು ಅವರಲ್ಲಿ 806 ಕಾನ್ಸ್ಟೇಬಲ್ ಗಳು, 174 ಹೋಮ್ ಗಾರ್ಡ್ಸ್, 160 ಮಹಿಳಾ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos