ರಾಜ್ಯ

ಉಡುಪಿ ಜಿಲ್ಲೆಯ 'ಅಮಾಸೆಬೈಲು' ಈಗ ರಾಜ್ಯದ ಮೊದಲ ಸೌರ ಗ್ರಾಮ!

Lingaraj Badiger
ಉಡುಪಿ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮದ ಎಲ್ಲ ಮನೆಗಳೂ ಸೌರ ವಿದ್ಯುತ್ ಅಳವಡಿಸಿಕೊಳ್ಳುವ ಮೂಲಕ ರಾಜ್ಯದ ಮೊಟ್ಟ ಮೊದಲ 'ಸೌರ ಗ್ರಾಮ ಪಂಚಾಯಿತಿ' ಎಂಬ ಹೆಮ್ಮೆಗೆ ಪಾತ್ರವಾಗಿದೆ. 
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಅಮಾಸೆಬೈಲು ಚಾರಿಟಬಲ್ ಟ್ರಸ್ಟ್, ಕರ್ನಾಟಕ ಬ್ಯಾಂಕ್ ಲಿಮಿಟೆಸ್ ಹಾಗೂ ಅಮಾಸೆಭೈಲು ಗ್ರಾಮದ ಸಂಯುಕ್ರಾಶ್ರಯದಲ್ಲಿ ಸೌರ ಗ್ರಾಮ ಯೋಜನೆಗೆ ಚಾಲನೆ ನೀಡಿ ಮಾತನಾಡಿದ, ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು, “ಸೌರ ವಿದ್ಯುತ್ ನ ಸಮರ್ಪಕ ಬಳಕೆಯಿಂದ ವಿದ್ಯುತ್ ಪೂರೈಕೆಯ ಬಿಕ್ಕಟ್ಟು ಪರಿಹಾರವಾಗುತ್ತದೆ, ತನ್ಮೂಲಕ ದೇಶದ ಆರ್ಥಿಕಾಭಿವೃದ್ಧಿಗೂ ಸಹಾಯವಾಗುತ್ತದೆ” ಎಂದರು.
ಇಂದಿನ ದಿನಮಾನದಲ್ಲಿ ಸೌರಶಕ್ತಿಯ ಬಳಕೆಯ ತುರ್ತು ಅಗತ್ಯವಿದೆ ಎಂದ ಅವರು, ಅಮಾಸೆಬೈಲು ಗ್ರಾಮವನ್ನು ಬೆಳಗಿಸುವ ಯೋಜನೆಯಡಿ, 2 ಕೋಟಿ 13 ಲಕ್ಷ ರೂ. ವೆಚ್ಚದಲ್ಲಿ 1800ಕ್ಕೂ ಹೆಚ್ಚು ಮನೆಗಳಿಗೆ ಸೌರವಿದ್ಯುತ್ ದೀಪ ಅಳವಡಿಸಲಾಗಿದೆ” ಎಂದು ತಿಳಿಸಿದರು.
ಸೀಕೊ ಸೌರ ವಿದ್ಯುತ್ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಡಾ. ಎಚ್. ಹರೀಶ್ ಹಂದೆ ಮಾತನಾಡಿ, “ದೇಶದ ಶೇ. 25ರಷ್ಟು ಜನರು ಇನ್ನೂ ವಿದ್ಯುತ್ ಕಂಡಿಲ್ಲ. ಇಂತಹ ಸಂದರ್ಭದಲ್ಲಿ ಅಮಾಸೆಬೈಲು ಸೌರವಿದ್ಯುತ್ ಯೋಜನೆಗೆ ಮಾದರಿಯಾಗಿ, ದೇಶಾದ್ಯಂತ ಜಾಗೃತಿ ಮೂಡಿಸಲಿದೆ” ಎಂದು ಆಶಿಸಿದರು.
SCROLL FOR NEXT