ರಾಜ್ಯ

ಐಎಂಎ ವಂಚನೆ ಪ್ರಕರಣ: SSLC ಕೂಡಾ ಪಾಸಾಗದವರಿಂದ ಸಾವಿರಾರು ಕೋಟಿ ರೂ. ವಂಚನೆ!

Srinivasamurthy VN
ಬೆಂಗಳೂರು: ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಐಎಂಎ ಜುವೆಲ್ಸ್ ವಂಚನೆ ಪ್ರಕರಣದ ರೂವಾರಿಗಳಾದ ಸಂಸ್ಥೆಯ ನಿರ್ದೇಶಕರು ಕನಿಷ್ಠ ಎಸ್ ಎಸ್ ಎಲ್ ಸಿ ಕೂಡ ಪಾಸಾಗಿಲ್ಲ ಎಂಬ ಅಚ್ಚರಿ ವಿಚಾರ ಇದೀಗ ಬಯಲಾಗಿದೆ.
ಸಾವಿರಾರು ಮಂದಿ ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂ.ಗಳನ್ನು ವಂಚನೆ ಮಾಡಿರುವ ಐಎಂಎ ಜುವೆಲ್ಸ್ ಸಂಸ್ಥೆಯ ನಿರ್ದೇಶಕರ ಪೈಕಿ ಹಲವರು ಎಸ್ ಎಸ್ ಎಲ್ ಸಿ ಕೂಡ ಪಾಸಾಗಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಸಂಸ್ಥೆಯ 7 ಮಂದಿ ನಿರ್ದೇಶಕರನ್ನು ಬಂಧಿಸಿದ್ದು, ಬಂಧಿತರನ್ನು ನಿಜಾಮುದ್ದೀನ್ ಖಾನ್, ನಾಸೀರ್ ಹುಸೇನ್, ನವೀದ್ ಅಹ್ಮದ್, ಅರ್ಷದ್‌ ಖಾನ್, ಅನ್ಸರ್ ಪಾಷಾ, ವಾಸೀಂ, ದಾದಾಪೀರ್ ಎಂದು ಗುರುತಿಸಲಾಗಿದೆ.
ಈ ಪೈಕಿ ನಿಜಾಮುದ್ದೀನ್, ಅರ್ಷದ್ ಖಾನ್ ಮತ್ತು ಅನ್ಸರ್ ಪಾಷಾ ಪದವಿದರರಾಗಿದ್ದು, ವಸೀಂ ಮತ್ತು ಅಹ್ಮದ್ ಪಿಯುಸಿ ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ. ಅಂತೆಯೇ ಮತ್ತಿಬ್ಬರು ನಿರ್ದೇಶಕರುಗಳಾದ ದಾದಾಪೀರ್ ಮತ್ತು ಹುಸೇನ್ ಎಸ್ ಎಸ್ ಎಲ್ ಸಿಯನ್ನು ಪೂರ್ಣಗೊಳಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಎಲ್ಲ ಏಳೂ ನಿರ್ದೇಶಕರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಏಳೂ ಮಂದಿ ನಿರ್ದೇಶಕರನ್ನೂ ನ್ಯಾಯಾಲಯ ಪೊಲೀಸ್ ವಶಕ್ಕೆ ನೀಡಿದೆ.
ಸ್ಕೈ ವಾಕ್‌ ನಿರ್ಮಾಣದಲ್ಲಿ ಪಾಲುದಾರಿಕೆ
ವಿವಿಧ ಉದ್ಯಮಗಳಲ್ಲಿ ಹಣ ಹೂಡಿಕೆ ಮಾಡಿರುವ ಐಎಂಎ ಕಂಪನಿ ಬೆಂಗಳೂರು ನಗರದಲ್ಲಿ ಜಂಟಿ ಪಾಲುದಾರಿಕೆಯಲ್ಲಿ ನಡೆಯುತ್ತಿರುವ 14 ‘ಸ್ಕೈ ವಾಕ್‌’ ನಿರ್ಮಾಣ ಕಾಮಗಾರಿಯಲ್ಲೂ ಭಾಗಿಯಾಗಿದೆ. ಈಗಾಗಲೇ ಎರಡು ಸ್ಕೈ ವಾಕ್‌ಗಳು ಪೂರ್ಣಗೊಂಡಿವೆ. ನಿರ್ಮಾಣ, ನಿರ್ವಹಣೆ ಹಾಗೂ ವರ್ಗಾವಣೆ (ಬಿಒಟಿ) ಆಧಾರದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದೂ ಮೂಲಗಳು ತಿಳಿಸಿವೆ.
SCROLL FOR NEXT