ರಾಜ್ಯ

ಕರಾವಳಿಯಲ್ಲಿ ವ್ಯಾಪಕ ಮಳೆ, ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಭರ್ತಿ

Sumana Upadhyaya
ಧರ್ಮಸ್ಥಳ: ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ನಿನ್ನೆಯಿಂದ ವ್ಯಾಪಕ ಮಳೆಯಾಗುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು, ಇದರಿಂದ ನೇತ್ರಾವತಿ ಸ್ನಾನಘಟ್ಟ ಭರ್ತಿಯಾಗಿದ್ದು ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರಲ್ಲಿ ಸಂತಸ ಉಂಟುಮಾಡಿದೆ.
ಕರಾವಳಿ ಜಿಲ್ಲೆಯಲ್ಲಿ ಇಷ್ಟು ದಿನ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗದೆ ಹಲವು ಕಡೆಗಳಲ್ಲಿ ನೀರಿಗೆ ತತ್ವರವುಂಟಾಗಿತ್ತು. ಅಡಿಕೆ, ತೆಂಗು, ಬಾಳೆ ತೋಟಗಳು ನೀರಿಲ್ಲದೆ ಒಣಗಿ ಹೋಗಿದ್ದವು. ನೇತ್ರಾವದಿ ನದಿ ನೀರಿನಲ್ಲಿ ಸಾಕಷ್ಟು ನೀರಿಲ್ಲದ್ದರಿಂದ ಧರ್ಮಸ್ಥಳಕ್ಕೆ ಭೇಟಿ ನೀಡುವವರು ತಮ್ಮ ಯಾತ್ರೆಯನ್ನು ಮುಂದೂಡುವಂತೆ, ಭಕ್ತರು ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಕರೆ ನೀಡಿದ್ದರು.
ನೇತ್ರಾವದಿ ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಕಡಿಮೆಯಾಗುತ್ತಿದೆ. ಹಾಗಾಗಿ ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳಿಗೆ ಅಧಿಕ ಪ್ರಮಾಣದ ನೀರು ಬೇಕಾಗಿರುವುದರಿಂದಾಗಿ ಭಕ್ತರು ಮತ್ತು ಪ್ರವಾಸಿಗಳು ತಮ್ಮ ಪ್ರವಾಸವನ್ನು ಮುಂದೂಡಿ ಎಂದು ಹೆಗ್ಗಡೆಯವರು ಕೋರಿಕೊಂಡಿದ್ದರು.
ಇನ್ನು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ಗುಡ್ಡ, ಮರ, ಗಿಡಗಳು ಕುಸಿದು ಹಾನಿಗೊಳಗಾಗಿವೆ. ಮಂಗಳೂರು ಸಮೀಪ ಬಲ್ಮಠ, ಉಳ್ಲಾಲ ಹತ್ತಿರ ಗುಡ್ಡ ಕುಸಿದು ಬಿದ್ದು ಮನೆಗಳಿಗೆ ಹಾನಿಗೀಡಾಗಿವೆ. 
SCROLL FOR NEXT