ಮುಖ್ಯಮಂತ್ರಿ ಕುಮಾರಸ್ವಾಮಿ, ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ. ಸಿಂಗ್ (ಸಂಗ್ರಹ ಚಿತ್ರ)
ಬೆಂಗಳೂರು: ಸತತ ಬರಗಾಲದ ದವಡೆಗೆ ಸಿಲುಕಿರುವ ಕರ್ನಾಟಕಕ್ಕೆ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ನೀಡುತ್ತಿರುವ ಅನುದಾನ ಕಡಿಮೆಯಿದ್ದು, ಇದನ್ನು ಹೆಚ್ಚಿಸಲು ಪರಿಶೀಲಿಸುವುದಾಗಿ 15 ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್ ಕೆ ಸಿಂಗ್ ಹೇಳಿದ್ದಾರೆ.
ರಾಜ್ಯದಲ್ಲಿ ಕೃಷಿ ಕ್ಷೇತ್ರ ನೆಲ ಕಚ್ಚಿದೆ. ಅಂತರ್ಜಲ ಕುಸಿತವಾಗಿದ್ದು, ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿಲ್ಲ. ಬಡತನ ಪ್ರಮಾಣ ಹೆಚ್ಚಾಗಿದ್ದು, ಬೆಂಗಳೂರು ನಗರದಲ್ಲಿ ತೀವ್ರ ಸಂಚಾರಿ ಒತ್ತಡದ ಸಮಸ್ಯೆ ಇದೆ. ಶಾಲಾಮಕ್ಕಳಲ್ಲಿ ರಕ್ತಹೀನತೆಯಂತಹ ಆರೋಗ್ಯ ಸಮಸ್ಯೆಗಳಿವೆ. ಜಿಎಸ್ ಟಿ ಜಾರಿಗೆ ಬಂದ ನಂತರ ಆದಾಯ ಸಂಗ್ರಹಣೆಯಲ್ಲಿ ಹಿಂದುಳಿದಿದೆ ಎಂದು ಅವರು ರಾಜ್ಯ ಸರ್ಕಾರದ ವೈಫಲ್ಯಗಳತ್ತ ಬೊಟ್ಟು ಮಾಡಿದ್ದಾರೆ.
ಇದೇ ರೀತಿ ಇಡೀ ದೇಶದಲ್ಲಿಯೇ ಕರ್ನಾಟಕ ಮಾದರಿ ರಾಜ್ಯವಾಗಿದ್ದು, ತಲಾದಾಯದಲ್ಲಿ ಇಡೀ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ವಿತ್ತೀಯ ಶಿಸ್ತು ಪಾಲನೆಯಲ್ಲಿ ಮುಂದಿದ್ದರೂ ಸಾಲ ಹೊಣೆಗಾರಿಕೆ ಪ್ರಮಾಣ ಹೆಚ್ಚಾಗಿರುವುದು ಆತಂಕಕಾರಿಯಾಗಿದೆ. ಅಭಿವೃದ್ಧಿ ಮಾನದಂಡಗಳನ್ನು ಉತ್ತಮವಾಗಿ ಪಾಲಿಸಿದ್ದು, ಅತಿ ಸಣ್ಣ ಮತ್ತು ಸಣ್ಣ ಹಣಕಾಸು ಕ್ಷೇತ್ರದಲ್ಲಿ ದೇಶದಲ್ಲಿಯೇ ಕರ್ನಾಟಕ ಅತ್ಯುತ್ತಮ ಸಾಧನೆ ಮಾಡಿದೆ ಎಂದರು.
ಕಳೆದ ಎರಡು ದಿನಗಳಿಂದ ಮುಖ್ಯಮಂತ್ರಿ, ಸಂಪುಟ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸ್ಥಳೀಯ ಸಂಸ್ಥೆಗಳು, ಸಂಘ ಸಂಸ್ಥೆಗಳ ಜತೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಸತತ ಬರ ಪರಿಸ್ಥಿತಿ ಇದ್ದು, ಈ ಪ್ರಕೃತಿ ವಿಕೋಪ ಎದುರಿಸಲು ನೀಡುತ್ತಿರುವ ಹರಿಹಾರ ತೃಪ್ತಿದಾಯಕವಾಗಿಲ್ಲ ಎಂದು ರಾಜ್ಯ ಸರ್ಕಾರ ಮನವಿ ಸಲ್ಲಿಸಿದ್ದು, ಇದನ್ನು ಆಯೋಗ ಪರಿಗಣಿಸಲಿದೆ ಎಂದರು.
ಕರ್ನಾಟಕ ಎರಡು ರಾಜ್ಯಗಳಂತೆ ಕಾಣುತ್ತಿದೆ. ಒಂದು ನಗರ ಕೇಂದ್ರಿತ ಸಮೃದ್ಧ ಆರ್ಥಿಕ ವಲಯವಾದರೆ, ಮತ್ತೊಂದು ಬಡತನ ಹೊಂದಿರುವ ಗ್ರಾಮೀಣ ಆರ್ಥಿಕ ರಾಜ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಬಡತನವಿದೆ. ಬಡತನ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದ್ದು, ಇದು ಸ್ವೀಕಾರಾರ್ಹವಲ್ಲ. ಅದರಲ್ಲೂ ಕೃಷಿ ವಲಯದಲ್ಲಿ ತೊಡಗಿದವರು ಹೆಚ್ಚು ಬಡತನದ ಬೇಗೆ ಅನುಭವಿಸುತ್ತಿದ್ದಾರೆ. ಹೀಗಾಗಿ ಕೃಷಿಗೆ ರಾಜ್ಯ ಸರ್ಕಾರ ಹೆಚ್ಚು ಆದ್ಯತೆ ಕೊಡಬೇಕು. ಬೆಳೆ ಪದ್ದತಿಯಲ್ಲಿ ಬದಲಾವಣೆ, ತಂತ್ರಜ್ಞಾನ ಮೇಲ್ದರ್ಜೆಗೇರಿಸಿಕೊಳ್ಳುವುದು, ಸಾವಯವ ಕೃಷಿ ಮತ್ತು ತೋಟಗಾರಿಕೆಗೆ ಉತ್ತೇಜನ ನೀಡುವ ಅಗತ್ಯವಿದೆ ಎಂದರು.
ಬರ ಪರಿಸ್ಥಿತಿಗೆ ಸಿಲುಕಿರುವ ರಾಜ್ಯದಲ್ಲಿ ಅಭಾವ ಪರಿಸ್ಥಿತಿ ನಿಭಾಯಿಸಲು ಮತ್ತು ಕುಡಿಯುವ ನೀರಿಗೆ ಹೆಚ್ಚು ಅನುದಾನ ಬೇಕೆಂದು ಕೋರಿದೆ. ಇದನ್ನು ಸೂಕ್ತ ರೀತಿಯಲ್ಲಿ ಪರಿಗಣಿಸಲಾಗುವುದು. ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಅನುಷ್ಠಾನದ ಜತೆಗೆ ಮಳೆ ನೀರು ಸಂಗ್ರಹಕ್ಕೆ ವಿಶೇಷ ಗಮನಹರಿಸಬೇಕಾಗಿದೆ ಎಂದು ಅವರು ಹೇಳಿದರು.
ರಾಜ್ಯ ವಿಭಿನ್ನವಾದ ಬೌಗೋಳಿಕ ಪರಿಸ್ಥಿತಿ ಹೊಂದಿದ್ದು, ದೇಶದಲ್ಲಿ ಅತಿ ಹೆಚ್ಚು ಮಳೆ ಬೀಳುವ ಚಿರಾಪುಂಜಿಗಿಂತಲೂ ರಾಜ್ಯದ ಕೆಲವೆಡೆ ಹೆಚ್ಚು ಮಳೆಯಾಗುತ್ತದೆ. ಹಾಗೆ ಸುರಿದ ಮಳೆ ನೀರನ್ನು ಸರಿಯಾಗಿ ಬಳಸಿಕೊಳ್ಳುವ ವಿಚಾರದಲ್ಲಿ ಅಷ್ಟೊಂದು ಬದ್ಧತೆ ತೋರುತ್ತಿಲ್ಲ. ಜತೆಗೆ ಬಹುಹಿಂದೆ ಕೈಗೆತ್ತಿಕೊಂಡ ನೀರಾವರಿ ಯೋಜನೆಗಳು ಪೂರ್ಣಗೊಂಡಿಲ್ಲ. ಕಳೆದ ಐದು ವರ್ಷಗಳಲ್ಲಿ ನೀರಾವರಿಗಾಗಿ 53 ಸಾವಿರ ಕೋಟಿ ರೂ ಖರ್ಚು ಮಾಡಿರುವುದಾಗಿ ಹೇಳುತ್ತಿದೆ. ಆದರೆ ವಾಸ್ತವ ಪರಿಸ್ಥಿತಿ ಭಿನ್ನವಾಗಿದೆ ಎಂದರು.
ರಾಜ್ಯದಲ್ಲಿ ಮೂಲಭೂತ ಸೌಲಭ್ಯ ಹೆಚ್ಚಿಸಿ, ಜನರ ಜೀವನ ಗುಣಮಟ್ಟದ ಉತ್ತಮಪಡಿಸಬೇಕಾಗಿದೆ. ಇಡೀ ದೇಶದ ಜನ ಬೆಂಗಳೂರಿಗೆ ವಲಸೆ ಬರುತ್ತಿದ್ದು, ಇದು ಕಾಸ್ಮೋ ಪಾಲಿಟಿನ್ ನಗರವಾಗಿ ಹೊರ ಹೊಮ್ಮಿದೆ. ಹೀಗಾಗಿ ಸಂಚಾರಿ ವ್ಯವಸ್ಥೆ ಹದಗೆಟ್ಟಿದ್ದು, ಮೇಟ್ರೋ ರೈಲು ಯೋಜನೆಯಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿಗೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ ಎಂದು ಎನ್.ಕೆ. ಸಿಂಗ್ ಹೇಳಿದರು.
ಶಾಲಾ ಮಕ್ಕಳಲ್ಲಿ ರಕ್ತ ಹೀನತೆ ಪ್ರಮಾಣ ಹೆಚ್ಚಾಗಿದ್ದು, ಇದು ಕಳವಳಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಹಲವು ಸಮಸ್ಯೆಗಳನ್ನು ನಮೂದಿಸಿ ಇಡೀ ದೇಶಕ್ಕೆ ಮಾದರಿಯಾದ ಮನವಿ ಪತ್ರ ಸಲ್ಲಿಸಿದೆ. ಇದೆಲ್ಲವನ್ನು ಪರಿಶೀಲಿಸಿ ರಾಜ್ಯಕ್ಕೆ ಸೂಕ್ತ ನೆರವು ನೀಡುವಂತೆ ಕೇಂದ್ರಕ್ಕೆ ವರದಿ ಸಲ್ಲಿಸುವುದಾಗಿ ಎನ್.ಕೆ. ಸಿಂಗ್ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos