ರಾಜ್ಯ

ದೊಡ್ಡಬಳ್ಳಾಪುರದಲ್ಲಿ ಬಾಂಗ್ಲಾದೇಶ ಮೂಲದ ಶಂಕಿತ ಉಗ್ರನ ಬಂಧನ

Lingaraj Badiger
ದೊಡ್ಡಬಳ್ಳಾಪುರ: ನಗರದ ಚಿಕ್ಕಪೇಟೆಯ ಮಸೀದಿಯೊಂದರಲ್ಲಿ ಆಶ್ರಯ ಪಡೆದಿದ್ದ ಬಾಂಗ್ಲಾದೇಶ ಮೂಲದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ) ಮಂಗಳವಾರ ಬಂಧಿಸಿದೆ.
ಜಮಾತ್‌ ಉಲ್‌ ಮುಜಾಹೀದ್ದೀನ್‌ ಬಾಂಗ್ಲಾದೇಶ್‌ ಸಂಘಟನೆ ಸೇರಿದ ಅಬಿಬುಲ್ಲಾ ರೆಹಮಾನ್‌(30) ಬಂಧಿತ ಶಂಕಿತ ಉಗ್ರನಾಗಿದ್ದಾನೆ. 2014ರಲ್ಲಿ ಬಿಹಾರದ ಬುದ್ಧಗಯಾದ ಸಮೀದ್ ನಗರದಲ್ಲಿ ಬಾಂಬ್‌ ತಯಾರಿಕೆ ಸಂದರ್ಭದಲ್ಲಿ ಬಾಂಬ್‌ಸ್ಫೋಟಗೊಂಡು ಇಬ್ಬರು ಮೃತಪಟ್ಟಿದ್ದು, ಸುಮಾರು 40 ಮಂದಿ ಗಾಯಗೊಂಡಿದ್ದರು. ಬಾಂಬ್‌ ತಯಾರಿಕೆಯಲ್ಲಿ ಭಾಗಿಯಾಗಿದ್ದ ಬಾಂಗ್ಲಾದೇಶದ ಅಬಿಬುಲ್ಲಾ ರೆಮಹಾನ್‌ ಅಂದಿನಿಂದ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕಾಗಿ ಎನ್‌ಐಎ ತಂಡ ಸತತ ಐದು ವರ್ಷಗಳಿಂದಲೂ ಶೋಧ ಕಾರ್ಯ ಕೈಗೊಂಡಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ನಗರದಲ್ಲಿ ಉಗ್ರನಿಗೆ ಆಶ್ರಯ ನೀಡಿದ್ದ ಮೌಲ್ವಿ ಅನ್ವರ್‌ಹುಸೇನ್‌ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಂಧಿತ ಉಗ್ರ ಅಬಿಬುಲ್ಲಾ ರೆಹಮಾನ್‌ನನ್ನು ಬೆಂಗಳೂರಿನ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲು ಅಸ್ಸಾಂ ಹಾಗೂ ಆಂಧ್ರಪ್ರದೇಶದ ಎನ್‌ಐಎ ತಂಡದ ಅಧಿಕಾರಿಗಳು ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
SCROLL FOR NEXT