ರಾಜ್ಯ

ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಸಮುದಾಯದಿಂದ ಬೃಹತ್ ಪ್ರತಿಭಟನೆ

Srinivasamurthy VN
ಬೆಂಗಳೂರು: ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಸಮುದಾಯದವರು ಹರಿಹರದ ರಾಜನಹಳ್ಳಿಯಿಂದ ರಾಜಧಾನಿ ಬೆಂಗಳೂರುವರೆಗೆ ಕಳೆದ 12 ದಿನಗಳಿಂದ ಪಾದಯಾತ್ರೆ ನಡೆಸಿ ನಗರದಲ್ಲಿಂದು ವಿಧಾನಸೌಧಕ್ಕೆ ಮುತ್ತಿಗೆ ಯತ್ನ ನಡೆಸಿದರು.
ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಜೂ 9ರಂದು ಕೈಗೊಂಡಿದ್ದ ಪಾದಯಾತ್ರೆ ಇಂದು ಬೆಂಗಳೂರು ತಲುಪಿ ಅಪಾರ ಸಂಖ್ಯೆಯಲ್ಲಿ ಜನ ಸೇರಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿದರು.
ಫ್ರೀಡಂ ಪಾರ್ಕ್‍ನಲ್ಲಿ ಸಮಾವೇಶಗೊಂಡ ಪ್ರತಿಭಟನಕಾರರು ಮೀಸಲಾತಿ ಪ್ರಮಾಣವನ್ನು ಶೇ.3 ರಿಂದ 7.5ರಷ್ಟು ಹೆಚ್ಚಿಸಬೇಕು. ಜನಸಂಖ್ಯೆ ಆಧರಿಸಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಕಾರರು ಸೇರಿದ್ದರಿಂದ ವಿಧಾನಸೌಧ, ಫ್ರೀಡಂ ಪಾರ್ಕ್, ಶೇಷಾದ್ರಿ ರಸ್ತೆ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿತ್ತು. ಇದೇ ಸಂದರ್ಭದಲ್ಲಿ ಕೆಲವು ಪ್ರತಿಭಟನಕಾರರು ವಿಧಾನಸೌಧದ ಆವರಣಕ್ಕೆ ನುಗ್ಗಿದ್ದರಿಂದ ವಿಧಾನಸೌಧದ ಮುಂಭಾಗದಲ್ಲೂ ಸಾರ್ವಜನಿಕರು ಟ್ರಾಫಿಕ್ ಕಿರಿಕಿರಿ ಅನುಭವಿಸಬೇಕಾಯಿತು.
ನಗರದ ಕೆ.ಆರ್.ವೃತ್ತ, ಹಡ್ಸನ್ ವೃತ್ತ, ಚಾಲುಕ್ಯ ವೃತ್ತ, ಆನಂದ್‍ರಾವ್ ವೃತ್ತ ಸೇರಿದಂತೆ ಅನೇಕ ಕಡೆ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ತೊಂದರೆಯಾಯಿತು. ವಿಧಾನಸೌಧದ ಬಳಿ ಪ್ರತಿಭಟನಕಾರರು ತೆರವುಗೊಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಕಳೆದ 12 ದಿನಗಳಿಂದ ಪಾದಯಾತ್ರೆ ನಡೆಸಿದ್ದೇವೆ. ರಾಜ್ಯದಲ್ಲಿ ನಮ್ಮ ಸಮುದಾಯದವರು ಸುಮಾರು 50 ಲಕ್ಷಕ್ಕೂ ಹೆಚ್ಚು ಜನರಿದ್ದೇವೆ. ಹಾಲಿ ಇರುವ 3.5ರಷ್ಟು ಮೀಸಲಾತಿ ಪ್ರಮಾಣವನ್ನು 7.5ಕ್ಕೆ ಹೆಚ್ಚಿಸಬೇಕು. ಸರ್ಕಾರದ ಕಣ್ಣು ತೆರೆಸಲು ಪಾದಯಾತ್ರೆ ಮಾಡಿದ್ದೇವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. 
ದಿನವಿಡೀ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಸರ್ಕಾರ ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂಬ ವಿಶ್ವಾಸವಿದೆ. ಇಲ್ಲದಿದ್ದರೆ ನಮ್ಮ ಹೋರಾಟದ ಸ್ವರೂಪ ಬದಲಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 
ಪಕ್ಷಾತೀತವಾಗಿ ಜನಪ್ರತಿನಿಧಿಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಪಾದಯಾತ್ರೆಯುದ್ದಕ್ಕೂ ನಮ್ಮ ಸಮುದಾಯದವರು ನಮಗೆ ಬೆಂಬಲ ನೀಡಿದ್ದಾರೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗಬೇಕೆಂಬ ಹಿನ್ನೆಲೆಯಲ್ಲಿ ಈ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು. ಸಾರ್ವಜನಿಕರು ತೊಂದರೆ ಕೊಡುವ ಉದ್ದೇಶ ನಮ್ಮದಲ್ಲ. ನಮ್ಮ ಬೇಡಿಕೆ ಈಡೇರಿಕೆಗೆ ನಮ್ಮ ಹೋರಾಟ ಎಂದು ಸ್ಪಷ್ಟಪಡಿಸಿದರು.
SCROLL FOR NEXT