ರಾಜ್ಯ

ಎಸ್ ಟಿ ಮೀಸಲಾತಿ ಪ್ರಮಾಣ ಹೆಚ್ಚಿಸದಿದ್ದರೆ ರಾಜೀನಾಮೆ: ವಾಲ್ಮೀಕಿ ಸಮುದಾಯದ ಶಾಸಕರ ಬೆದರಿಕೆ

Lingaraj Badiger
ಬೆಂಗಳೂರು: ಪರಿಶಿಷ್ಟ ಪಂಗಡಕ್ಕೆ ನೀಡಲಾಗುತ್ತಿರುವ ಮೀಸಲಾತಿ ಪ್ರಮಾಣವನ್ನು ಶೇ. 3ರಿಂದ ಶೇ. 7.5ರವರೆಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ವಾಲ್ಮೀಕಿ ಸಮುದಾಯ ನಗರದಲ್ಲಿ ಮಂಗಳವಾರ ಬೃಹತ್‍ ಪ್ರತಿಭಟನೆ ನಡೆಸಿದ್ದರಿಂದ ವಿಧಾನ ಸೌಧ ಸುತ್ತಮುತ್ತ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ವಾಲ್ಮೀಕ ಸಮುದಾಯದ ವಿಧಾನಸಭಾ ಸದಸ್ಯರು, ವಾಲ್ಮೀಕಿ ಸಮುದಾಯಕ್ಕೆ ಹೆಚ್ಚಿನ ಶೇಕಡವಾರು ಮೀಸಲಾತಿ ಪ್ರಮಾಣವನ್ನು ಕಲ್ಪಿಸಲು ರಾಜ್ಯ ಸರ್ಕಾರ ಪರಿಗಣಿಸದಿದ್ದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ ಪಕ್ಷಬೇಧ ಮರೆತು ಬೆದರಿಕೆ ಹಾಕಿದ್ದಾರೆ.
ಕಳೆದ 15 ದಿನಗಳಿಂದ ಬಳ್ಳಾರಿಯಿಂದ ಪಾದಯಾತ್ರೆ ಮೂಲಕ ನಗರಕ್ಕೆ ಆಗಮಿಸಿದ್ದ ಪ್ರಸನ್ನಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ಸಾವಿರಾರು ಚಳವಳಿಗಾರರು ವಿಧಾನಸೌಧವರೆಗೆ ಮೆರವಣಿಗೆ ನಡೆಸಿದ್ದರಿಂದ, ನಗರದ ಹೃದಯಭಾಗದಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಪೊಲೀಸರು ಮನವೊಲಿಸಿದ ನಂತರ ಪ್ರತಿಭಟನಾಕಾರರು ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶಗೊಂಡರು.
ಎಸ್ ಟಿ ಮೀಸಲಾತಿಯನ್ನು ಶೇ. 3 ರಿಂದ 7.5 ಕ್ಕೆ ಹೆಚ್ಚಿಸಬೇಕು ಎಂದು ಕಾಂಗ್ರೆಸ್ ಶಾಸಕ ನಾಗೇಂದ್ರ, ಬಿಜೆಪಿ ಶಾಸಕ ಬಿ. ಶ್ರೀರಾಮುಲು, ಮಾಜಿ ಸಂಸದ ಮತ್ತು ಕಾಂಗ್ರೆಸ್ ಮುಖಂಡ ವಿ. ಎಸ್. ಉಗ್ರಪ್ಪ ಹಾಗೂ ಇತರ ಚಳವಳಿಗಾರರು ಒತ್ತಾಯಿಸಿದ್ದಾರೆ. 
ವಾಲ್ಮೀಕಿ ಸಮುದಾಯಕ್ಕೆ ಸೇರಿದ ಜನರಿಗೆ ಮೀಸಲಾತಿ ಒದಗಿಸಲು ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಆದರೆ, ವಾಲ್ಮೀಕ ಸಮುದಾಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಹಾಗೂ ಬಂಡಾಯ ಕಾಂಗ್ರೆಸ್ ನಾಯಕ ಸತೀಶ್‍ ಜಾರಕಿಹೊಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರಲಿಲ್ಲ.
SCROLL FOR NEXT