ರಾಜ್ಯ

ಧಾರವಾಡ: ಗಿಡ ನೆಟ್ಟು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಸಂಚಾರಿ ಪೊಲೀಸ್

Lingaraj Badiger
ಧಾರವಾಡ: ಧಾರವಾಡದ ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಮನೆಯ ರಸ್ತೆಯಲ್ಲಿ 20 ಸಸಿಗಳನ್ನು ನೆಟ್ಟು, 100ಕ್ಕೂ ಹೆಚ್ಚು ಸಸಿಗಳನ್ನು ನೆರೆಹೊರೆಯವರಿಗೆ ವಿತರಿಸುವ ಮೂಲಕ ತಮ್ಮ 10ನೇ ವಿವಾಹ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಸಂಚಾರಿ ಇನ್ಸ್ ಪೆಕ್ಟರ್ ಮುರಗೇಶ್ ಚೆನ್ನಣ್ಣನವರ್ ಅವರು ಜೂನ್ 18ರಂದು ಶಿವಗಿರಿಯ 18ನೇ ಕ್ರಾಸ್ ನಲ್ಲಿ ನಾಲ್ಕು ವಿಧದ 20 ಸಸಿಗಳನ್ನು ನೆಟ್ಟಿದ್ದು, ಪ್ರಾಣಿಗಳಿಂದ ಅವುಗಳನ್ನು ರಕ್ಷಿಸಲು ಬೇಲಿ ಸಹ ಹಾಕಿದ್ದಾರೆ. ಚೆನ್ನಣ್ಣನವರ್ ಈ ಕಾರ್ಯಕ್ಕೆ ಪರಿಸರ ವಾದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಚೆನ್ನಣ್ಣನವರ್, ಹಲವು ಕಾರ್ಯಕ್ರಗಳಲ್ಲಿ ನಾನು ಸಸಿ ನೆಡುವ ಮೂಲಕ ಆ ಕಾರ್ಯಕ್ರಮವನ್ನು ಉದ್ಘಾಟಿಸುತ್ತೇನೆ. ಇದರ ಹೊರತಾಗಿಯೂ ಜನರು ಹೆಚ್ಚು ಹೆಚ್ಚು ಸಸಿಗಳನ್ನು ನೆಡಬೇಕು. ಈ ಮೂಲಕ ಕಾಡಿನ ನಾಶ ತಡೆದು, ಹಸಿರು ಹೆಚ್ಚಿಸಬೇಕು ಎಂದಿದ್ದಾರೆ.
ಸಾಮಾಜಕ್ಕಾಗಿ ಯಾರಾದರೂ ಏನಾದರೂ ಮಾಡಲಿ ಎಂದು ಕಾಯುವುದರ ಬದಲು ನಾವೇ ಸಮಾಜಕ್ಕಾಗಿ ಏನಾದರೂ ಮಾಡಬೇಕು. ಈ ಮೂಲಕ ನಾವು ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದ್ದಾರೆ.
SCROLL FOR NEXT