ರಾಜ್ಯ

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಫೋಟೋಗ್ರಾಫರ್ ಗೆ ಕಾರ್ಪೊರೇಟರ್ ಬೆದರಿಕೆ!

Srinivas Rao BV
ಬೆಂಗಳೂರು: ಜನಸಾಮಾನ್ಯರ ಜೊತೆ ಒರಟಾಗಿ ನಡೆದುಕೊಳ್ಳುವ ರಾಜಕಾರಣಿಗಳಿಗೇನು ಬರವಿಲ್ಲ. ಪತ್ರಕರ್ತರೂ ಇಂತಹ ರಾಜಕಾರಣಿಗಳ ಒರಟುತನದ ಅನುಭವದಿಂದ ಹೊರತಾಗಿಲ್ಲ. 
ಕಾಟನ್ ಪೇಟೆ ವಾರ್ಡ್ ನ ಕಾರ್ಪೊರೇಟರ್ ಡಿ ಪ್ರಮೋದ್, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಫೋಟೋಗ್ರಾಫರ್ ಪುಷ್ಕರ್ ವಿ ಗೆ ಬೆದರಿಕೆ ಹಾಕಿದ್ದು, ತನ್ನ ವಾರ್ಡ್ ನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳ ಫೋಟೋ ಹಾಗೂ ಆ ಕುರಿತು ಯಾವುದೇ ವರದಿ ಪ್ರಕಟಿಸದಂತೆ ಬೆದರಿಕೆ ಹಾಕಿದ್ದಾರೆ. 
ಆಗಿದ್ದು ಇಷ್ಟು. ಮಾ.06 ರಂದು ಮೆಜಸ್ಟಿಕ್ ಗೆ ತೆರಳುವ ಮಾರ್ಗದಲ್ಲಿರುವ, ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ಕಾಟನ್ ಪೇಟೆಯ ಮುಖ್ಯ ರಸ್ತೆಯನ್ನು ಸಂಪೂರ್ಣವಾಗಿ ಅಗೆಯಲಾಗಿತ್ತು. ಇದನ್ನು ಗಮನಿಸಿದ ಪತ್ರಕರ್ತ ತಕ್ಷಣವೇ ಕಾಮಗಾರಿಯ ಫೋಟೊಗಳನ್ನು ಕ್ಲಿಕ್ಕಿಸಿದ್ದಾರೆ. ಜೊತೆಗೆ ಕಾಮಗಾರಿಯಿಂದ ಸ್ಥಳೀಯ ವ್ಯಾಪಾರಿಗಳಿಗೆ ಹಾಗೂ ಪಾದಚಾರಿಗಳಿಗೆ ಸಮಸ್ಯೆ ಉಂಟಾಗುತ್ತಿದೆಯೇ ಎಂಬ ಬಗ್ಗೆ ಮಾಹಿತಿ ಪಡೆಯಲು ವ್ಯಾಪಾರಿಯೊಬ್ಬರ ಪ್ರತಿಕ್ರಿಯೆ ಕೇಳಿದ್ದಾರೆ. ಪ್ರತಿಕ್ರಿಯೆ ಪಡೆಯುತ್ತಿರುವಾಗಲೇ ಅಡ್ಡಿ ಮಾಡಿದ ಕಾರ್ಪೊರೇಟರ್ ಗಳ ಬೆಂಬಲಿಗರು, ಅಲ್ಲೇ ಹತ್ತಿರದ ದೇವಾಲಯದಲ್ಲಿ ಕಾರ್ಪೊರೇಟರ್ ಪ್ರಮೋದ್ ನಿಮ್ಮನ್ನು ಭೇಟಿ ಮಾಡಲು ಸೂಚಿಸಿದ್ದಾರೆ. 
ಕಾರ್ಪೊರೇಟರ್ ನ್ನು ಭೇಟಿ ಮಾಡಿದ ಪುಷ್ಕರ್ ತಾವು ತಮ್ಮ ಕೆಲಸವನ್ನಷ್ಟೇ ಮಾಡುತ್ತಿದ್ದಾಗಿ ವಿವರಿಸಿದ್ದಾರೆ. ಆದರೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರ್ಪೊರೇಟರ್ ಹಾಗೂ ಆತನ ಬೆಂಬಲಿಗರು ವರದಿ ಪ್ರಕಟಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ, ಜೈಲಿಗೆ ಹೋಗಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಸುಮಾರು 30 ನಿಮಿಷಗಳ ಕಾಲ ನಡೆದ ಚರ್ಚೆಯ ನಂತರ ಪುಷ್ಕರ್ ನ್ನು ತೆರಳಲು ಬಿಟ್ಟಿದ್ದಾರೆ. ಇಷ್ಟೆಲ್ಲಾ ಆದರೂ ಸಹ ವಾಪಸ್ ತೆರಳುತ್ತಿದ್ದ ಪುಷ್ಕರ್ ನ್ನು ಕರೆದು ಕಾಮಗಾರಿ ಕುರಿತಂತೆ ಏನನ್ನೂ ಪ್ರಕಟಿಸದಂತೆ ವಾರ್ಡ್ ಕಾರ್ಪೊರೇಟರ್ ಎಚ್ಚರಿಕೆ ನೀಡಿದ್ದಾರೆ. ತಮ್ಮ ಬೆದರಿಕೆ ವಿಷಯ ಬಹಿರಂಗವಾಗುತ್ತಿದ್ದಂತೆಯೇ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಸೇರಿ ವಿರೋಧಿಗಳು ನನ್ನ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ್ದಾರೆ ಎಂದು  ಕಾರ್ಪೊರೇಟರ್ ಪ್ರಮೋದ್ ಆರೋಪಿಸಿ, ಪತ್ರಕರ್ತನ ವಿರುದ್ಧ ಪ್ರಕರಣ ದಾಖಲಿಸುವುದಾಗಿಯೂ ಎಚ್ಚರಿಸಿದ್ದಾರೆ. 
ಘಟನೆಯ 30 ನಿಮಿಷಗಳ ನಂತರ ಗಾಂಧಿನಗರದ ಶಾಸಕ ದಿನೇಶ್ ಗುಂಡೂರಾವ್ ಅವರ ಆಪ್ತ ಸಹಾಯಕ ಕರೆ ಮಾಡಿ ಪ್ರಮೋದ್ ಅವರು ಮಾಡಿದ್ದು ತಪ್ಪಾಗಿದೆ. ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಈ ಘಟನೆ ಬಗ್ಗೆ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಸಹ ಪ್ರತಿಕ್ರಿಯೆ ನೀಡಿದ್ದು, ಕಾರ್ಪೊರೇಟರ್ ಗಳ ಈ ರೀತಿಯ ವರ್ತನೆಯನ್ನು ಸಮರ್ಥಿಸುವುದಿಲ್ಲ. ಘಟನೆಯ ವಿವರ ನನಗೆ ತಿಳಿಯದೇ ಇದ್ದರೂ ಕಾಮಗಾರಿ ಫೋಟೋಗಳನ್ನು ಕ್ಲಿಕ್ಕಿಸುವುದಕ್ಕೆ ಪತ್ರಕರ್ತರಿಗೆ ಅಡ್ಡಿ ಮಾಡಬಾರದಿತ್ತು ಎಂದು ಹೇಳಿದ್ದಾರೆ. 
SCROLL FOR NEXT