ಬೆಂಗಳೂರು: ನಗರದಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದ 2 ಪೋಕರ್ ಕ್ಲಬ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಈ ವೇಳೆ46 ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ನಗರದ ಚಾಮರಾಜಪೇಟೆಯ ಟಾರ್ ಗೋಲ್ಡ್ ರಿಕ್ರಿಯೇಷನ್ ಕ್ಲಬ್ ಮೇಲೆ ದಾಳಿ ನಡೆಸಿದ ಕೇಂದ್ರ ಅಪರಾಧ ವಿಭಾಗ(ಸಿಸಿಬಿ), ಜೂಜಾಟದಲ್ಲಿ ತೊಡಗಿದ್ದ 11 ಮಂದಿಯನ್ನು ಬಂಧಿಸಿ, 88 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.
ನ್ಯಾಯಾಲಯದ ನಿಬಂಧನೆಗಳನ್ನು ಉಲ್ಲಂಘಿಸಿ, ಕ್ಲಬ್ ನ ಸದಸ್ಯರಲ್ಲದ ಕೆಲ ವ್ಯಕ್ತಿಗಳು ಅಲ್ಲಿ ಇಸ್ಟೀಟ್ ಆಟದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿದ ಸಿಸಿಬಿ ವಿಶೇಷ ವಿಚಾರಣಾ ದಳದ ಪೊಲೀಸರು ಶುಕ್ರವಾರ ಕ್ಲಬ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಪೊಲೀಸರು ಯೋಗೇಶ್, ಮಹದೇವಸ್ವಾಮಿ, ಹರೀಶ್, ಹರೀಶ, ಹೇಮಂತಕುಮಾರ್, ಮುತ್ತುರಾಜು, ವಾಸೀಂ ಅಲಿಖಾನ್, ಶ್ರೀನಿವಾಸ, ಮಹೇಶ, ಪ್ರಶಾಂತ ಮತ್ತು ಕ್ಲಬ್ ಮಾಲೀಕ ಶಿವರಾಮು ಎಂಬುವವರನ್ನು ಬಂಧಿಸಿದ್ದಾರೆ.
ನಗರದ ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹಾಗೂ ಉಪ ಪೊಲೀಸ್ ಆಯುಕ್ತ ಗಿರೀಶ್.ಎಸ್ ನೇತೃತ್ವದ ತಂಡ ಈ ದಾಳಿ ನಡೆಸಿತ್ತು. ಬಂಧಿತರ ವಿರುದ್ದ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದೇ ಮಾದರಿಯಲ್ಲಿ ನಗರದ ಗೊರಗುಂಟೆಪಾಳ್ಯದ ವೆಂಕಟೇಶ್ವರ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಶಿಯೇಷನ್ ಕ್ಲಬ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಕಾನೂನುಬಾಹಿರವಾಗಿ ಇಸ್ಟೀಟ್ ಆಟದಲ್ಲಿ ತೊಡಗಿದ್ದ 36 ಜನರನ್ನು ಬಂಧಿಸಿ, ಅವರಿಂದ 1.2 ಲಕ್ಷ ನಗದು ಹಾಗೂ 15 ಕಟ್ಟು ಇಸ್ಟೀಟ್ ಎಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ದ ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics