ಮಕ್ಕಳ ಮನೆಯಲ್ಲಿ ಮಕ್ಕಳ ವಿನೋದ
ಮರಸೂರು: ಗ್ರಾಮ ಪಂಚಾಯತ್ ಸದಸ್ಯರ ಕ್ರಿಯಾಶೀಲ ಕಾರ್ಯವೈಖರಿಯಿಂದ ಸರ್ಕಾರಿ ಶಾಲೆಯಲ್ಲಿ ಕಡಿಮೆಯಾಗಿದ್ದ ವಿದ್ಯಾರ್ಥಿಗಳ ಸಂಖ್ಯೆ ಮತ್ತೆ ಹೆಚ್ಚಾಗಿರುವುದನ್ನು ಆನೇಕಲ್ ತಾಲ್ಲೂಕಿನ ಚಂದಾಪುರ ಸಮೀಪವಿರುವ ಮರಸೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಾಣಬಹುದು.
ಖಾಸಗಿ ಶಾಲೆಯ ಮಾದರಿಯಲ್ಲಿ ಪೂರ್ವ ಪ್ರಾಥಮಿಕ ಹಂತದಲ್ಲಿ ಆಂಗ್ಲಮಾಧ್ಯಮದಲ್ಲಿ ಮಕ್ಕಳ ಮನೆ ಎಂಬ ತರಗತಿಯನ್ನು ಗ್ರಾಮ ಪಂಚಾಯತ್ ಸದಸ್ಯರೆಲ್ಲ ಒಟ್ಟು ಸೇರಿ ಆರಂಭಿಸಿದ್ದು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಲು ಕಾರಣವಾಯಿತು.
ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಪುರುಷೋತ್ತಮ ಮಕ್ಕಳ ಮನೆಯನ್ನು ಹುಟ್ಟುಹಾಕಿದರು. ಅವರು ಕೂಡ ಅದೇ ಸರ್ಕಾರಿ ಶಾಲೆಯಲ್ಲಿ ಓದಿದ್ದು. ''ನಾವು ಓದುತ್ತಿದ್ದಾಗ ತುಂಬಾ ಜನ ಮಕ್ಕಳು ಬರುತ್ತಿದ್ದರು. ಆದರೆ ನಂತರ ಸುತ್ತಮುತ್ತ ಇಂಗ್ಲಿಷ್ ಮಾಧ್ಯಮ ಶಾಲೆಗಳು ಆರಂಭವಾದ ನಂತರ ನಾವು ಓದಿದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗತೊಡಗಿತು. 600 ಮಕ್ಕಳಿದ್ದ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 100ಕ್ಕೆ ಇಳಿಯಿತು. ಇದಕ್ಕೆ ಏನಾದರೂ ಮಾಡಬೇಕು ಎಂದು ನಿರ್ಧರಿಸಿದೆವು. ಕೆ ಆರ್ ನಗರದಲ್ಲಿ ರಾಜ್ಯ ಅಭಿವೃದ್ಧಿ ನಿರ್ವಹಣ ಸಮಿತಿ ನಡೆಸುವ ಪೂರ್ವ ಪ್ರಾಥಮಿಕ ಶಾಲೆಯ ಬಗ್ಗೆ ಕೇಳಲ್ಪಟ್ಟೆವು. ಅದರಂತೆ ಹೊಸ ತರಗತಿ ಕೊಠಡಿ ಇಲ್ಲಿ ನಿರ್ಮಿಸಿ ಖಾಸಗಿ ಶಾಲೆಯ ಮಾದರಿಯಲ್ಲಿ ಪೂರ್ವ ಪ್ರಾಥಮಿಕ ಹಂತವನ್ನು ಆರಂಭಿಸಿದೆವು. ನಾವೇ ಮಕ್ಕಳಿಗೆ ಸಮವಸ್ತ್ರ, ಶೂ ನೀಡಿದೆವು. ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಶಿಕ್ಷಕಿಯರನ್ನು ಕರೆದುಕೊಂಡು ಬಂದು ಈ ಶಾಲೆಗೆ ನೇಮಿಸಿಕೊಂಡೆವು'' ಎನ್ನುತ್ತಾರೆ ಪುರುಷೋತ್ತಮ.
ಇಂದಿನ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಭಾಕರ್ ರೆಡ್ಡಿ ಈ ಕಾರ್ಯವನ್ನು ಮುಂದುವರಿಸಿಕೊಂಡು ಹೋದರು. ಶಾಲಾ ಮಕ್ಕಳಿಗೆ ವಾಹನದ ವ್ಯವಸ್ಥೆ ಮಾಡಿದರು. ಗ್ರಾಮದಲ್ಲಿ ಶಾಲಾ ವಾಹನ ಬೆಳಗ್ಗೆ 8 ಗಂಟೆಗೆ ಹೋಗಿ ಮಕ್ಕಳನ್ನು ಕರೆದುಕೊಂಡು ಶಾಲೆಯಲ್ಲಿ ಬಿಟ್ಟು ನಂತರ ಸಾಯಂಕಾಲ ಬಿಡುತ್ತಾರೆ. ಇದೀಗ ಎಲ್ ಕೆಜಿ ಮತ್ತು ಯುಕೆಜಿಯಲ್ಲಿ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 50ರಿಂದ 80ಕ್ಕೇರಿದೆಯಂತೆ.
ಗ್ರಾಮ ಪಂಚಾಯತ್ ಈ ಶಾಲೆ ನಡೆಸಲು ಪ್ರತಿವರ್ಷ 7 ಲಕ್ಷ ರೂಪಾಯಿ ಖರ್ಚು ಮಾಡುತ್ತದೆ. ಮಕ್ಕಳು ಮನೆಯಿಂದ ತಿನ್ನಲು ಆಹಾರ ತರುವುದು ಬಿಟ್ಟರೆ ಬೇರೆಲ್ಲಾ ಖರ್ಚು ಪಂಚಾಯತ್ ನದ್ದೇ ಎನ್ನುತ್ತಾರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿ ಕಿರಣ್. ಪಂಚಾಯತ್ ನಲ್ಲಿರುವ ಊಟದ ಮನೆಯಲ್ಲಿ ಮಕ್ಕಳಿಗೆ ಊಟ ನೀಡುವ ಯೋಜನೆ ಕೂಡ ಮಾಡುತ್ತಿದ್ದೇವೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos