ರಾಜ್ಯ

ಉಪನ್ಯಾಸಕರಿಂದ ದ್ವಿತೀಯ ಪಿಯುಸಿ ಪರೀಕ್ಷಾ ಮೌಲ್ಯಮಾಪನ ಬಹಿಷ್ಕಾರ

Lingaraj Badiger
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷಾ ಮೌಲ್ಯಮಾಪನಕ್ಕೆ ಈ ಬಾರಿಯೂ ವಿಘ್ನ ಎದುರಾಗಲಿದೆ. ಮಾ. 23ರಿಂದ ಆರಂಭಗೊಳ್ಳಲಿರುವ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಬಹಿಷ್ಕರಿಸಲು ಪದವಿಪೂರ್ವ ಉಪನ್ಯಾಸಕರು ನಿರ್ಧರಿಸಿದ್ದಾರೆ. 
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪದವಿ ಪೂರ್ವ ಉಪನ್ಯಾಸಕರು ಸಾಮೂಹಿಕವಾಗಿ ಮೌಲ್ಯಮಾಪನ ಬಹಿಷ್ಕರಿಸಿ, ಮಾ.21ರಿಂದ ನಗರದ ಸ್ವತಂತ್ರ ಉದ್ಯಾನದಲ್ಲಿ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ. 
ಈ ಸಂಬಂಧ ಇಂದು ನಗರದ ಖಾಸಗಿ ಹೋಟೆಲ್‍ ನಲ್ಲಿ ನಡೆದ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. 
1971ರ ಮಾದರಿಯಲ್ಲಿ ಉಪನ್ಯಾಸಕರಿಗೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರಜೆ ನೀಡಬೇಕು. ಪಿಯುಸಿ ಕಾಲೇಜುಗಳನ್ನು ಮೇ 2ರ ಬದಲಿಗೆ ಮೇ 28ರಂದು ಪ್ರಾರಂಭಿಸಬೇಕು. ಪ್ರತಿ ವರ್ಷ ಉಪನ್ಯಾಸಕರಿಗೆ 30 ಗಳಿಕೆ ರಜೆ, 20 ಅರ್ಧ ವೇತನ ರಜೆ ಹಾಗೂ ತಿಂಗಳ ಎರಡನೇ ಶನಿವಾರಗಳಂದು ರಜೆ ನೀಡಬೇಕು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಡ್ಡಾಯಗೊಳಿಸದೆ, ಐಚ್ಛಿಕವಾಗಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು  ಸಂಘ ಮುಂದಿಟ್ಟಿದೆ. 
ಸಂಘದ ಯಾವುದೇ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ನಾವು ಅನಿವಾರ್ಯವಾಗಿ ಮೌಲ್ಯಮಾಪನ ಬಹಿಷ್ಕರಿಸುತ್ತಿದ್ದೇವೆ. ಅದರಿಂದ ಉಂಟಾಗುವ ತೊಂದರೆಗಳಿಗೆ ಶಿಕ್ಷಣ ಇಲಾಖೆಯೇ ಹೊಣೆ ಎಂದು ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಯುಎನ್ಐ ಕನ್ನಡ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. 
ಆದರೆ, ಮೌಲ್ಯಮಾಪನಕ್ಕೆ ಗೈರುಹಾಜರಾಗುವ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. 
ಇಲಾಖೆಯ ನಿರ್ದೇಶಕ ಪಿ.ಸಿ.ಜಾಫರ್, ಶಿಕ್ಷಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಪ್ರತಿ ವರ್ಷ ಮೌಲ್ಯಮಾಪನದ ಸಂದರ್ಭದಲ್ಲಿ ಹೋರಾಟಕ್ಕಿಳಿಯುವುದು ಸರಿಯಲ್ಲ. ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡಬಾರದು. ಮೇ 2ರಂದು ಪದವಿ ಪೂರ್ವ ಕಾಲೇಜು ಆರಂಭಿಸಬೇಕು ಎಂಬುದು ಸರ್ಕಾರದ ನಿರ್ಧಾರ. ಇದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾಗಿರುವ ತೀರ್ಮಾನ ಎಂದಿದ್ದಾರೆ. 
ಸಂಘದ ಹೋರಾಟಕ್ಕೆ ವಿಧಾನಪರಿಷತ್‍ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹಾಗೂ ಬೋಜೇಗೌಡ ಬೆಂಬಲ ಸೂಚಿಸಿದ್ದಾರೆ.
SCROLL FOR NEXT