ಬೆಂಗಳೂರು: ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಅವರು ಜನ ಸಾಮಾನ್ಯರು, ಜನಪ್ರತಿನಿಧಿಗಳ ಕೆಲಸ ಮಾಡುವುದಿಲ್ಲ. ಬದಲಿಗೆ ಚಿತ್ರನಟಿಯ ಕೆಲಸ ಮಾಡಿಕೊಡಲು ಅತ್ಯುತ್ಸಾಹ ತೋರುತ್ತಾರೆ ಎಂದು ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್.ಟಿ. ಸೋಮಶೇಖರ್ ವ್ಯಂಗ್ಯವಾಡಿದ್ದಾರೆ.
ಬಿಡಿಎ ಆಯುಕ್ತರ ವರ್ಗಾವಣೆಗೆ ತಾವು ಒತ್ತಡ ಹೇರುತ್ತಿರುವುದಾಗಿ ತಮ್ಮ ವಿರುದ್ಧ ಬಂದಿರುವ ಆರೋಪಗಳಿಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಕೇಶ್ ಸಿಂಗ್ ಅವರು ಚಿತ್ರನಟಿಯ ಕೆಲಸ ಮಾತ್ರ ಮಾಡುತ್ತಾರೆ. ಖಾಸಗಿ ಹೋಟೆಲ್ ಗೆ ದಾಖಲೆ ತರಿಸಿಕೊಂಡು ಪರಿಶೀಲಿಸುತ್ತಾರೆ. ಬಾಲು ಎಂಬ ಏಜೆಂಟ್ ಹೇಳಿದ ಕೆಲಸ ಮಾಡುತ್ತಿದ್ದಾರೆ. 10 ಕಡತಗಳನ್ನು ವಿಲೇವಾರಿ ಮಾಡಲು ಅಶೋಕ ಹೋಟೆಲ್ ನಲ್ಲಿ ಕೊಠಡಿ ಬುಕ್ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಬಂದಿದೆ ಎಂದು ಹೇಳಿದರು.
ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರದ್ದು ಎಲುಬಿಲ್ಲದ ನಾಲಿಗೆ. ತಮ್ಮ ಬಳಿ ಇವರ 100 ಕೋಟಿಗೂ ಅಧಿಕ ಮೌಲ್ಯದ ಅವ್ಯವಹಾರದ ದಾಖಲೆ ಇದೆ. ಸಮಯ ಬಂದರೆ, ಬಿಡುಗಡೆ ಮಾಡುತ್ತೇನೆ. ಅದಕ್ಕೂ ಮುನ್ನ ನಮ್ಮ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ಎಸ್.ಟಿ. ಸೋಮಶೇಖರ್ ಹೇಳಿದರು.
ರಾಕೇಶ್ ಸಿಂಗ್ ಅವರ ಮೇಲೆ ಬಂದ ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ ದೂರು ನೀಡಿರುವುದನ್ನು ಒಪ್ಪಿಕೊಂಡ ಅವರು, ಅದಕ್ಕಾಗಿಯೇ ತಮ್ಮ ವಿರುದ್ಧ ಪಿತೂರಿ ನಡೆಯುತ್ತಿದೆ. ಹೀಗಾಗಿ ರಾಕೇಶ್ ಸಿಂಗ್ ತಮ್ಮ ಯಾವುದೇ ಕೆಲಸವನ್ನು ಮಾಡಿಕೊಡುತ್ತಿಲ್ಲ. ಅವರ ವಿರುದ್ದ ಮಾತಾಡಿದ್ದರಿಂದ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ಹಾಗೆಂದು ತಾವು ಬಿಡಿಎ ಆಯುಕ್ತರ ವರ್ಗಾವಣೆ ಗೆ ಒತ್ತಡ ಹೇರಿಲ್ಲ, ಬದಲಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಖಾಯಂ ಆಯುಕ್ತರನ್ನು ನೇಮಿಸಿ ಎಂದು ಮನವಿ ಮಾಡಿರುವುದಾಗಿ ಸ್ಪಷ್ಟಪಡಿಸಿದರು.
ತಾವು ರಾಮಲಿಂಗಮ್ ನಿರ್ಮಾಣ ಸಂಸ್ಥೆ ಪರವಾಗಿಲ್ಲ. ಈ ಹಿಂದೆ ರಾಮಲಿಂಗಮ್ ಸಂಸ್ಥೆಗೆ ಮಂಜೂರಾಗಿದ್ದ ಟೆಂಡರ್ ಗೆ ವರ್ಕ್ ಆರ್ಡರ್ ಕೊಡಿ ಎಂದು ಹೇಳಿದ್ದೆ. ಇಷ್ಟಕ್ಕೂ ರಾಮಲಿಂಗಮ್ ಕಂಪನಿ ಬ್ಲಾಕ್ ಲಿಸ್ಟ್ ನಲ್ಲಿ ಇಲ್ಲ. ಬ್ಲಾಕ್ ಲಿಸ್ಟ್ ನಲ್ಲಿ ಇದ್ದಿದ್ದರೆ ಕಮಿಷನರ್ ತಮಗೆ ಮಾಹಿತಿ ನೀಡಬೇಕಾಗಿತ್ತು. ರಾಮಲಿಂಗಮ್ ಅವರಿಗೂ ತಮಗೂ ಯಾವುದೇ ಸಂಬಂಧವಿಲ್ಲ. ತಾವು ಯಾರಿಗೂ ಟೆಂಡರ್ ಕೊಡಿ ಎಂದು ಒತ್ತಡ ಹೇರಿಲ್ಲ ಎಂದರು.