ಬೆಂಗಳೂರು: ಬೆಂಗಳೂರು ವಿಮಾನ ದುರಂತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ವಿಮಾನ ಅಪಘಾತಕ್ಕೆ ಪೈಲಟ್ ಗಳ ತಪ್ಪು ಕಾರಣವಲ್ಲ. ಬದಲಿಗೆ ವಿಮಾನಗಳಲ್ಲಿನ ತಾಂತ್ರಿಕ ದೋಷವೇ ಕಾರಣ ಎಂದು ಹೇಳಲಾಗಿದೆ.
ಕಳೆದ ಫೆಬ್ರವರಿ 1ರಂದು ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಸಂಭವಿಸಿದ್ದ ಮಿರಾಜ್ 2000 ಯುದ್ಧ ವಿಮಾನ ಪತನ ದುರಂತಕ್ಕೆ ಸಂಬಂಧಿಸಿದಂತೆ ವಿಮಾನದ ಬ್ಲಾಕ್ ಬಾಕ್ಸ್ ವಶಕ್ಕೆ ಪಡೆದಿದ್ದ ಅಧಿಕಾರಿಗಳು ಅದನ್ನು ಹೆಚ್ಚಿನ ತನಿಖೆಗಾಗಿ ಫ್ರಾನ್ಸ್ ಗೆ ರವಾನೆ ಮಾಡಿದ್ದರು. ಇದೀಗ ಅಲ್ಲಿಂದ ಪ್ರಾಥಮಿಕ ವರದಿ ಅಧಿಕಾರಿಗಳ ಕೈ ತಲುಪಿದೆ. ಅಂತೆಯೇ ತನಿಖೆಯಲ್ಲಿ ವಿಮಾನ ದುರಂತಕ್ಕೆ ಪೈಲಟ್ ಗಳು ಕಾರಣರಲ್ಲ. ಬದಲಿಗೆ ವಿಮಾನದಲ್ಲಿದ್ದ ತಾಂತ್ರಿಕ ದೋಷವೇ ಕಾರಣ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.
ವಿಮಾನದಲ್ಲಿದ್ದ ಸೆನ್ಸಾರ್ ವ್ಯವಸ್ಥೆಯ ತಾಂತ್ರಿಕ ದೋಷ ಅಪಘಾತಕ್ಕೆ ಮೂಲ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಆದರೂ ನಿಖರ ಕಾರಣಕ್ಕಾಗಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ವಿಮಾನ ಅಪ್ ಗ್ರೇಡ್ ಮಾಡಿದ್ದ ಎಚ್ ಎಎಲ್
ಇನ್ನು ಅಂದು ಪತನವಾಗಿದ್ದ ಮಿರಾಜ್ 2000 ಯುದ್ಧ ವಿಮಾನವನ್ನು ಕೆಲ ತಿಂಗಳ ಹಿಂದಷ್ಟೇ ಎಚ್ ಎಎಲ್ ಸಂಸ್ಥೆ ಅಪ್ ಗ್ರೇಡ್ ಮಾಡಿತ್ತು ಎನ್ನಲಾಗಿದೆ. ವಿಮಾನದಲ್ಲಿದನ ಸೆನ್ಸಾರ್ ವ್ಯವಸ್ಥೆ ಸೇರಿದಂತೆ ಹಲವು ಪ್ರಮುಖ ವ್ಯವಸ್ಥೆಗಳನ್ನು ಎಚ್ ಎಎಲ್ ಅಪ್ ಗ್ರೇಡ್ ಮಾಡಿತ್ತು. ಅಲ್ಲದೆ ವಿಮಾನ ಬಳಕೆಗೆ ಸೂಕ್ತ ಎಂದೂ ಹೇಳಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇನ್ನು ಕಳೆದ ಫೆಬ್ರವರಿ 1ರಂದು ಬೆಂಗಳೂರಿನ ಯಲಹಂಕ ವಾಯುನೆಲೆ ಕಾಪೌಂಡ್ ನಲ್ಲಿ ಮಿರಾಜ್ 2000 ಯುದ್ಧ ವಿಮಾನ ಪತನವಾಗಿತ್ತು. ಅಂತೆಯೇ ವಿಮಾನದಲ್ಲಿದ್ದ ಪೈಲಟ್ ಗಳಾದ ಸಿದ್ಧಾರ್ಥ್ ನೇಗಿ ಮತ್ತು ಸಮೀರ್ ಅಬ್ರೋಲ್ ಸಾವನ್ನಪ್ಪಿದ್ದರು. ಇನ್ನು ತನಿಖೆಯಲ್ಲಿನ ಅಂಶಗಳ ಅನ್ವಯ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪೈಲಟ್ ಗಳು ತಾಂತ್ರಿಕ ಸಮಸ್ಯೆ ಎದುರಿಸಿದ್ದರು. ಕೂಡಲೇ ಇಬ್ಬರು ಪೈಲಟ್ ಗಳ ಪೈಕಿ ಓರ್ವ ವಿಮಾನದಿಂದ ಹೊರಕ್ಕೆ ಜಿಗಿದಿದ್ದರಾದರೂ ಬೆಂಕಿ ಹೊತ್ತಿದ್ದ ವಿಮಾನದ ಅವಶೇಷಗಳ ಮೇಲೆಯೇ ಬಿದಿದ್ದರಿಂದ ಅವರೂ ಕೂಡ ಸಾವನ್ನಪ್ಪಿದ್ದರು. ಮತ್ತೋರ್ವ ಪೈಲಟ್ ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅವರು ಸಾವನ್ನಪ್ಪಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos