ಬೆಂಗಳೂರು: ಹೌಸ್ ಕೀಪಿಂಗ್ ಮಹಿಳೆ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ ಅಪಾರ್ಟ್ ಮೆಂಟ್ ನ ಮೇಲ್ವಿಚಾರಕನೊಬ್ಬನನ್ನು ಬಂಧಿಸಿದ ಘಟನೆ ವಿದ್ಯಾರಣ್ಯಪುರದಲ್ಲಿ ನಡೆದಿದೆ.
ಆರೋಪಿ ವಿದ್ಯಾರಣ್ಯಪುರ ನಿವಾಸಿ 58 ವರ್ಷದ ಜೋಸೆಫ್ ಎಂದು ಗುರುತಿಸಲಾಗಿದ್ದು ಅಪಾರ್ಟ್ ಮೆಂಟ್ ನ ನಿರ್ವಹಣಾ ಕೊಠಡಿಯನ್ನು ಸ್ವಚ್ಛಗೊಳಿಸಲು ಹೇಳಿ ಅಲ್ಲಿ ಆಕೆ ಸ್ವಚ್ಛ ಮಾಡುತ್ತಿದ್ದಾಗ ಅತ್ಯಾಚಾರವೆಸಗಲು ಯತ್ನಿಸಿದ್ದ ಎನ್ನಲಾಗಿದೆ.
ಅವಂಬವಾನಿ ನಗರದ ನಿವಾಸಿ ಸಂಧ್ಯಾ ಈ ಅಪಾರ್ಟ್ ಮೆಂಟ್ ನಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದಳು. ಕಳೆದ ಮಾರ್ಚ್ 20ರಂದು ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಜೋಸೆಫ್ ಸಂಧ್ಯಾಳನ್ನು ಮೈಂಟೆನೆನ್ಸ್ ರೂಂಗೆ ಕರೆದಿದ್ದಾನೆ. ಅಲ್ಲಿ ಕೋಣೆಯ ಮೂಲೆಯಲ್ಲಿ ಸ್ವಚ್ಛ ಮಾಡುತ್ತಿದ್ದಾಗ ಜೋಸೆಫ್ ಹಿಂದಿನಿಂದ ಬಂದು ಗಟ್ಟಿಯಾಗಿ ಹಿಡಿದು ಅತ್ಯಾಚಾರವೆಸಗಲು ಯತ್ನಿಸಿದ. ಸಂಧ್ಯಾ ಹೇಗೋ ತಪ್ಪಿಸಿಕೊಂಡು ಹೊರಬಂದಳು. ಉಳಿದ ಹೌಸ್ ಕೀಪಿಂಗ್ ಸಿಬ್ಬಂದಿ ಅಳುತ್ತಿದ್ದ ಸಂಧ್ಯಾಳನ್ನು ಏನಾಯ್ತೆಂದು ಕೇಳಿದಾಗ ಎಲ್ಲವನ್ನೂ ವಿವರಿಸಿದಳು.
ಮರುದಿನ ಸಂಧ್ಯಾ ಮತ್ತು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದರು. ಘಟನೆಯಾದ ದಿನ ಜೋಸೆಫ್ ಸಂಧ್ಯಾಳನ್ನು ಕರೆದುಕೊಂಡು ಸೂಪರ್ ಮಾರ್ಕೆಟ್ ಗೆ ಹೋಗಿ ಹೌಸ್ ಕೀಪಿಂಗ್ ಗೆ ಬೇಕಾದ ವಸ್ತುಗಳನ್ನು ತಂದಿದ್ದನು. ಸಂಧ್ಯಾಳ ಮೊಬೈಲ್ ಸಂಖ್ಯೆಯನ್ನು ಕೂಡ ಕೇಳಿದ್ದನು. ಆದರೆ ಆಕೆ ಕೊಡಲು ನಿರಾಕರಿಸಿದ್ದಳು.