ರಾಜ್ಯ

ಮಾಜಿ ಸಚಿವ ವೈಜನಾಥ ಪಾಟೀಲ್ ವಿಧಿವಶ

Srinivasamurthy VN

ಕಲಬುರ್ಗಿ: ಮಾಜಿ ಸಚಿವ ವೈಜನಾಥ ಪಾಟೀಲ್ ಅವರು ಇಂದು ಬೆಳಗ್ಗೆ ನಿಧನರಾಗಿದ್ದು, ಅವರಿಗೆ 82 ವರ್ಷ ವಯಸ್ಸಾಗಿತ್ತು.

ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವೈಜನಾಥ ಪಾಟೀಲ್ ರನ್ನು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಅವರು ಇಂದು ಬೆಳಗ್ಗೆ ಆರು ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಎಂಎಸ್ಐಎಲ್‌ನ ಮಾಜಿ ಅಧ್ಯಕ್ಷರಾದ ಡಾ.ವಿಕ್ರಮ್ ಪಾಟೀಲ, ಜಿ.ಪಂ. ಗೌತಮ ಪಾಟೀಲ ಸೇರಿ ಮೂವರು ಪುತ್ರರು, ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ನಾಳೆ (ಭಾನುವಾರ) ಮಧ್ಯಾಹ್ನ ಚಿಂಚೋಳಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇನ್ನು ಮೂಲತಃ ಬೀದರ್ ಜಿಲ್ಲೆಯವರಾದ ವೈಜನಾಥರು ಪತ್ನಿಯ ಊರು ಕಲಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿ ನೆಲೆಸಿದ್ದರು. ಅಲ್ಲಿಂದಲೇ ಶಾಸಕರಾಗಿ ಎರಡು ಬಾರಿ ಆಯ್ಕೆಯಾಗಿದ್ದರು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ (1984) ತೋಟಗಾರಿಕೆ ಸಚಿವರಾಗಿ ಹಾಗೂ ಎಚ್.ಡಿ.ದೇವೇಗೌಡ ಮುಖ್ಯಮಂತ್ರಿಯಾಗಿದ್ದಾಗ (1994) ನಗರಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಕಲ್ಯಾಣ ಕರ್ನಾಟಕಕ್ಕೆ ಶ್ರಮಿಸಿದ್ದ ವೈಜನಾಥ ಪಾಟೀಲ್
ಕಲ್ಯಾಣ ಕರ್ನಾಟಕ ಎಂದು ಕರೆಯಲಾಗುವ ರಾಜ್ಯದ ಅತಿ ಹಿಂದುಳಿದ ಪ್ರದೇಶವಾದ ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗಾಗಿ ಪಾಟೀಲರು ಶ್ರಮಿಸಿದ್ದರು.  371ಜೆ ವಿಧಿ ಜಾರಿಗಾಗಿ ಅವಿರತವಾಗಿ ಹೋರಾಡಿದ್ದರು. ಈ ಭಾಗದ ಜನರಿಗೆ ಹಲವು ಅನುಕೂಲ ಕಲ್ಪಿಸುವ ಮತ್ತು ಅಲ್ಲಿನ ಅಭಿವೃದ್ಧಿಗೆ ಅವಕಾಶ ಮಾಡಿಕೊಡುವ 371ಜೆ ವಿಧಿ ಜಾರಿಗೆ 20 ವರ್ಷಗಳಷ್ಟು ಹಿಂದೆಯೇ ಒತ್ತಾಯಿಸಿ, ಹೋರಾಟ ರೂಪಿಸಿದ್ದರು. 

SCROLL FOR NEXT