ಸಿಎಂ ಭೇಟಿಗೆ ಬರುವವರು ಮೊಬೈಲ್ ತರುವಂತಿಲ್ಲ: ಬಿಎಸ್ವೈ ಖಡಕ್ ಆದೇಶ
ಅಪರೇಷನ್ ಕಮಲ ಕುರಿತು ಹುಬ್ಬಳ್ಳಿಯಲ್ಲಿ ನಡೆದ ಸಭೆಯೊಂದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದಾರೆ ಎನ್ನಲಾದ ಹೇಳಿಕೆಯ ಆಡಿಯೋ ಸೋರಿಕೆಯಾದ ವಿಷಯ ರಾಜ್ಯ....
ಬೆಂಗಳೂರು: ಅಪರೇಷನ್ ಕಮಲ ಕುರಿತು ಹುಬ್ಬಳ್ಳಿಯಲ್ಲಿ ನಡೆದ ಸಭೆಯೊಂದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದಾರೆ ಎನ್ನಲಾದ ಹೇಳಿಕೆಯ ಆಡಿಯೋ ಸೋರಿಕೆಯಾದ ವಿಷಯ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಸದ್ದು ಮಾಡಿದ ಕಾರಣ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮ ಭೇಟಿಗೆ ಬರುವವರಿಗೆ ಮೊಬೈಲ್ ನಿಷೇಧ ಹೇರಿದ್ದಾರೆ.
ತಮ್ಮ ಭೇಟಿಗೆ ಬರುವ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಮೊಬೈಲ್ ತರದಂತೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಭೇಟಿ ಬರುವವರ ಮೊಬೈಲ್ ತಪಾಸಣೆಗೂ ಪೊಲೀಸರಿಗೂ ಸೂಚನೆ ನೀಡಿದ್ದಾರೆ. ಯಡಿಯೂರಪ್ಪ ಸೂಚನೆ ಹಿನ್ನೆಲೆ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಮೊಬೈಲ್ ನಿಷೇಧದ ಬಗ್ಗೆ ಬೋರ್ಡ್ ಹಾಕಲಾಗಿದೆ.
ಇತ್ತೀಚೆಗೆ ಯಡಿಯೂರಪ್ಪ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಜತೆ ಸಭೆ ನಡೆಸುತ್ತಿದ್ದ ವೇಳೆ ಅನರ್ಹ ಶಾಸಕರ ಅಪರೇಷನ್ ಕಮಲದ ಬಗ್ಗೆ ಮಾತನಾಡಿದ್ದ ಆಡಿಯೋ ಬಹಿರಂಗ ಆಗಿತ್ತು. ಮೈತ್ರಿ ಸರ್ಕಾರದ ಪತನಕ್ಕೆ ಅಮಿತ್ ಷಾ ಅವರ ಒಪ್ಪಿಗೆ ಇತ್ತು. ಅವರ ನೇರ ಉಸ್ತುವಾರಿಯಲ್ಲೇ ಅನರ್ಹ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು, ಮತ್ತು ಅವರಿಗೆ ಮುಂಬೈಯಲ್ಲಿ ಸೂಕ್ತ ಭದ್ರತೆಯನ್ನು ಅವರೇ ಒದಗಿಸಿದ್ದರು ಎಂದು ಯಡಿಯೂರಪ್ಪ ಅಲ್ಲಿ ಹೇಳಿರುವುದು ವಿಡಿಯೋದಲ್ಲಿ ಬಹಿರಂಗಗೊಂಡಿತ್ತು.