ಬಾದಾಮಿ ಅಗಸ್ತ್ಯ ತೀರ್ಥ 
ರಾಜ್ಯ

ಬಾಗಲಕೋಟೆ: ಎಲ್ಲವು ಇದ್ದೂ ಇಂದಿಗೂ ಬೆಳವಣಿಗೆ ಕಾಣದ ಪ್ರವಾಸೋದ್ಯಮ 

ಶಿಲ್ಪಕಲೆ ತೊಟ್ಟಿಲು ಎಂದು ಹೆಸರಾಗಿರುವ ಐಹೊಳೆ ಸೇರಿದಂತೆ ಪಟ್ಟದಕಲ್ಲು ಹಾಗೂ ಬಾದಾಮಿ ವಿಶ್ವ ಪ್ರವಾಸಿ ತಾಣಗಳು ಇದ್ದರೂ ಪ್ರವಾಸೋದ್ಯಮ ಅಭಿವೃದ್ಧಿ ಎನ್ನುವುದು ಇಂದಿಗೂ ಮರಿಚಿಕೆ ಆಗಿದೆ.

ಬಾಗಲಕೋಟೆ: ಶಿಲ್ಪಕಲೆ ತೊಟ್ಟಿಲು ಎಂದು ಹೆಸರಾಗಿರುವ ಐಹೊಳೆ ಸೇರಿದಂತೆ ಪಟ್ಟದಕಲ್ಲು ಹಾಗೂ ಬಾದಾಮಿ ವಿಶ್ವ ಪ್ರವಾಸಿ ತಾಣಗಳು ಇದ್ದರೂ ಪ್ರವಾಸೋದ್ಯಮ ಅಭಿವೃದ್ಧಿ ಎನ್ನುವುದು ಇಂದಿಗೂ ಮರಿಚಿಕೆ ಆಗಿದೆ.

ಐಹೊಳೆ, ಬಾದಾಮಿ ಮತ್ತು ಪಟ್ಟದಕಲ್ಲಿನಲ್ಲಿ ಐತಿಹಾಸಿಕ ಸ್ಮಾರಕಗಳು ಸೇರಿದಂತೆ ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮ, ವೀರಶೈವ-ಲಿಂಗಾಯತ ಸಮುದಾಯ ಸೇರಿದಂತೆ ನಾನಾ ಸಮುದಾಯಗಳ ಮಠಗಳಿಗೆ ಜಗದ್ಗುರುಗಳನ್ನು ಸಜ್ಜುಗೊಳಿಸುವ ಶಿವಯೋಗ ಮಂದಿರ, ಮಹಾಕೂಟ ಮತ್ತು ಧಾರ್ಮಿಕ ಸ್ಥಳ ಬನಶಂಕರಿ ಪ್ರವಾಸಿಗರಿಗೆ ಅಚ್ಚುಮೆಚ್ಚು.ಪ್ರತಿವರ್ಷ ನವೆಂಬರ್‌ನಿಂದ  ಬೇಸಿಗೆ ಮುಗಿಯುವವರೆಗೂ ದೇಶ, ವಿದೇಶಗಳಿಂದ ಪ್ರವಾಸಿಗರು, ಅಧ್ಯಯನಕಾರರು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರವಾಸಿಗರನ್ನು, ಇತಿಹಾಸ, ಶಿಲ್ಪಕಲೆ ಅಧ್ಯಯನಕ್ಕಾಗಿ ಆಗಮಿಸುವವರನ್ನು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕಿದೆ.

ದೇಶ, ವಿದೇಶಿ ಪ್ರವಾಸಿಗರಿಗೆ ಬೇಕಾದ ಮೂಲ ಸೌಲಭ್ಯಗಳು ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳಲ್ಲಿ ಇಲ್ಲ ಎನ್ನುವ ಕಾರಣಕ್ಕಾಗಿ ಬರುವ ಪ್ರವಾಸಿಗರೆಲ್ಲ ಹಾಗೆ ಬಂದು ಹೀಗೆ ಹೋಗುತ್ತಿದ್ದಾರೆ. ಪರಿಣಾಮವಾಗಿ ಪ್ರವಾಸೋದ್ಯಮ ಕ್ಷೇತ್ರ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯುತ್ತಿಲ್ಲ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಎಷ್ಟೆಲ್ಲ ಬೆಳವಣಿಗೆ ಸಾಧಿಸಲು ಸಾಧ್ಯವಿದೆಯೋ ಅಷ್ಟೆಲ್ಲ ಅವಕಾಶಗಳಿವೆ. ಇರುವ ಅವಕಾಶಗಳನ್ನು ಸರ್ಕಾರ ಬಳಕೆ ಮಾಡಿಕೊಳ್ಳದ ಪರಿಣಾಮ ಪ್ರವಾಸೋದ್ಯಮ ಕ್ಷೇತ್ರ ಬೆಳವಣಿಗೆ ಕಾಣುತ್ತಿಲ್ಲ. ಹಾಗಾಗಿ ಬಹುದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿ ಆಗುತ್ತಿಲ್ಲ.

ದೇಶ, ವಿದೇಶಗಳಿಂದ ವಿವಿಧ  ವರ್ಗದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.ಅವರಿಗೆ ಅಗತ್ಯಕ್ಕೆ ಅನುಗುಣವಾದ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಬಾದಾಮಿಯಲ್ಲಿ ಬೃಹದಾಕಾರದ ಅಗಸ್ತ್ಯ ತೀರ್ಥವಿದೆ.ಇಂದಿಗೂ ಅಲ್ಲಿ ಸ್ಥಳೀಯರು ಬಟ್ಟೆ ತೊಳೆಯುವುದು,ಅವುಗಳನ್ನು ಒಣಗಿಹಾಕುವುದು ಮಾಡುತ್ತಾರೆ. ಅಲ್ಲಿ ಪ್ರವಾಸಿಗರ ವಿನೋದ ವಿಹಾರಕ್ಕಾಗಿ ಸಮರ್ಪಕ ವಿಹಾರದ ವ್ಯವಸ್ಥೆ ಇಲ್ಲ. ಅಕ್ರಮ ಮನೆಗಳ ತೆರವು ಆಗುತ್ತಿಲ್ಲ. ಹೀಗೆ ಐಹೊಳೆ ಮತ್ತು ಪಟ್ಟದಕಲ್ಲಿನಲ್ಲೂ ಪ್ರವಾಸಿಗರನ್ನು ಆಕರ್ಷಿಸಲು ಸಾಕಷ್ಟು ಅವಕಾಶಗಳಿದ್ದೂ ಪ್ರವಾಸೋದ್ಯಮ ಬೆಳವಣಿಗೆಗೆ ಸರ್ಕಾರ ಮನಸ್ಸು ಮಾಡುತ್ತಿಲ್ಲ.

ಇದೀಗ ಪ್ರವಾಸೋದ್ಯಮ ಸಚಿವರು ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮನಸ್ಸು ಮಾಡಿದಂತೆ ಕಾಣಿಸುತ್ತಿದೆ. ಹಾಗಾಗಿ ಸರ್ಕಾರ ಪ್ರವಾಸಿ ತಾಣಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸುವ ಜತೆಗೆ ಈ ಭಾಗದ ಸಾಂಸ್ಕೃತಿಕ ರಾಯಭಾರಿಯಂತಿರುವ ಸಾಂಪ್ರದಾಯಿಕ ಇಳಕಲ್ ಸೀರೆ, ಗುಳೇದಗುಡ್ಡದ ಖಣ, ಅಮೀನಗಡದ ಕರದಂಟು, ರಬಕವಿ-ಬನಹಟ್ಟಿಯ ಕಾಟನ್ ಸೀರೆಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವ ಮಹತ್ತರ ಕೆಲಸಕ್ಕೆ ಸರ್ಕಾರ ಮುಂದಾಗಬೇಕಿದೆ. ಆ ಮೂಲಕ ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಲು ಸಾಧ್ಯವಾಗಲಿದೆ.

ಒಂದೊಮ್ಮೆ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಷಯದಲ್ಲಿ ಇಚ್ಚಾಶಕ್ತಿ ಮೆರೆದಲ್ಲಿ ಹೆಚ್ಚು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳ ಸೃಷ್ಠಿ ಆಗಲಿದೆ. ಜತೆಗೆ ಇಲ್ಲಿನ ನಾನಾ ರೀತಿಯ ವೈಶಿಷ್ಟ್ಯಮಯ  ಉತ್ಪಾದನೆಗಳಿಗೆ ಜಾಗತಿಕ ಮಟ್ಟದಲ್ಲಿ ಉತ್ತಮ ಮಾರುಕಟ್ಟೆ ಲಭ್ಯವಾಗಲಿದೆ. ಜತೆಗೆ ಇಲ್ಲಿನ ಜನತೆಯ ಆರ್ಥಿಕ ಮಟ್ಟ ಕೂಡ ಹೆಚ್ಚಳವಾಗಲಿದೆ.

ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬೆಳೆಯಲು ಸಾಕಷ್ಟು ಅವಕಾಶಗಳಿದ್ದಾಗ್ಯೂ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಗೆ ಕಳೆದ ಹತ್ತು ವರ್ಷಗಳಿಂದ ಪೂರ್ಣಾವಧಿ ಉಪನಿರ್ದೇಶಕರಿಲ್ಲ. ಬರೀ ಪ್ರಭಾರಿ ಅಧಿಕಾರಿಗಳೇ ಇಲಾಖೆ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆಗೆ ಚುರುಕು ನೀಡಲು ಪೂರ್ಣಾವಧಿ ಉಪನಿರ್ದೇಶಕರ ನೇಮಕ ಆಗಬೇಕಿದೆ. ಇದು ಆಗದ ಹೊರತು ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ನಿರೀಕ್ಷೆ ಸಾಧ್ಯವಾಗದು.

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಮತ್ತು ಬೆಳಕಿಗೆ ಬಾರದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು ನೀಡಲು ಮುಂದಾಗಿರುವುದು ಆಶಾದಾಯಕ ಬೆಳವಣಿಗೆ ಆಗಿದೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯ ಮೊದಲ ಹಂತವಾಗಿ ಸಚಿವರು ಇಲಾಖೆಗೆ ಪೂರ್ಣಾವಧಿ ಉಪ ನಿರ್ದೇಶಕರನ್ನು ನೇಮಕ ಮಾಡಬೇಕು. ಆ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ನಾಂದಿ ಹಾಡಬೇಕಿದೆ. ಪೂರ್ಣಾವಧಿ ಉಪನಿರ್ದೇಶಕರನ್ನು ನೇಮಕ ಮಾಡುವ ಮೂಲಕ ಸಚಿವರು ಇಲಾಖೆಯನ್ನು ಸದೃಢಗೊಳಿಸಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಎಷ್ಟರ ಮಟ್ಟಿಗೆ ಒತ್ತು ನೀಡಲಿದ್ದಾರೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.

ವರದಿ: ವಿಠ್ಠಲ ಆರ್. ಬಲಕುಂದಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

ಯಾವುದೇ ಸಂಪರ್ಕ ಕಡಿತಗೊಳ್ಳದೇ ಎಲ್ಲಾ ಇ-ಮೇಲ್ ಗಳನ್ನು Gmail ನಿಂದ Zoho Mail ಗೆ ವರ್ಗಾವಣೆ ಮಾಡುವುದು ಹೇಗೆ? ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

SCROLL FOR NEXT