ರಾಜ್ಯ

ಉಪಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರಲಿದೆಯೇ ಮಾಧುಸ್ವಾಮಿ ವಿವಾದ? 

Manjula VN

ತುಮಕೂರು: ಹೇಳಿಕೆ ಸಂಬಂಧ ಸಚಿವ ಮಾಧುಸ್ವಾಮಿ ವಿಷಾದ ವ್ಯಕ್ತಪಡಿಸಿದ್ದರೂ, ಸ್ವತಃ ಸಿಎಂ ಯಡಿಯೂರಪ್ಪ ಅವರೇ ಕ್ಷಮೆಯಾಚಿಸಿದರೂ, ಇದಾವುದಕ್ಕೂ ಕುರುಬ ಸಮುದಾಯದವರು ಒಪ್ಪದೆ, ತಮ್ಮ ಪ್ರತಿಭಟನೆ, ವಿರೋಧವನ್ನು ವ್ಯಕ್ತಪಡಿಸುತ್ತಿದ್ದು, ಈ ಎಲ್ಲಾ ಬೆಳವಣಿಗೆಗಳೂ ಉಪಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಕುರುಬ ಸಮುದಾಯದ ನಾಯಕರ ಮೂಲಕ ಕುರುಬ ಸಮುದಾಯದ ಬೆಂಬಲ ಪಡೆಯಲು ಯಡಿಯೂರಪ್ಪ ಯತ್ನ ನಡೆಸುತ್ತಿದ್ದಾರೆ. ಮಾಜಿ ಸಚಿವರಾದ ಎಹೆಚ್. ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಆರ್ ಶಂಕರ್ ಅವರನ್ನು ಮೂಲಕ ಸಮುದಾಯದ ಬೆಂಬಲ ಪಡೆದು ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಎಲ್ಲಾ ರೀತಿಯ ಯತ್ನಗಳನ್ನು ಯಡಿಯೂರಪ್ಪ ಅವರು ಮಾಡುತ್ತಿದ್ದಾರೆ. ಆದರೆ, ಈ ನಡುವಲ್ಲೇ ಮಾಧುಸ್ವಾಮಿಯವರ ಯಡವಟ್ಟು ಈ ಪ್ರಯತ್ನಗಳಿಗೆ ನೀರಿನಲ್ಲಿ ಹೋಮ ಮಾಡಿದಂತೆ ಮಾಡುತ್ತಿದೆ. 

ಮಾಧುಸ್ವಾಮಿಯವರನ್ನು ಸಚಿವ ಸಂಪುಟದಿಂದ ತೆಗೆದು ಹಾಕುವಂತೆ ಕುರುಬ ಸಮುದಾಯದವರು ಆಗ್ರಹಿಸುತ್ತಿದ್ದು, ಹುಳಿಯಾರ್ ಹಾಗೂ ಶಿಕಾರಿಪುರ ಬಂದ್'ಗೆ ಈಗಾಗಲೇ ಕರೆ ನೀಡಿದೆ. 

ಹುಣಸೂರಿನಲ್ಲಿ ವಿಶ್ವನಾಥ್, ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಅವರಿಗೆ ಕುರುಬ ಸಮುದಾಯ ಬೆಂಬಲ ನೀಡುವುದಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದಂತೆ ನಾವು ಮಾಡುತ್ತೇವೆಂದು ಕನಕ ಯುವ ಸೇನೆ ನಾಯಕ ಕೆಂಪರಾಜು ಹೇಳಿದ್ದಾರೆ. 

ಈ ನಡುವೆ ಹಾಲುಮತ ಸ್ವಾಮೀಜಿಗೆ ಅಗೌರವ ತೋರಿದ ವಿವಾದದ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯಿಂದ ಮಾಧುಸ್ವಾಮಿಯವರಿಗೆ ಕೊಕ್ ನೀಡಿ ಆ ಜವಾಬ್ದಾರಿಯನ್ನು ಡಿಸಿಎಂ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರಿಗೆ ವಹಿಸಲಾಗಿದೆ. 

ಅಶ್ವತ್ಥ ನಾರಾಯಣ ಅವರಿಗೆ ಈ ಹಿಂದೆ ಹೊಸಕೋಟೆ ಉಸ್ತುವಾರಿ ನೀಡಲಾಗಿತ್ತು. ಅದನ್ನು ಬದಲಾಯಿಸಿ ಇದೀಗ ಕೆ.ಆರ್.ಪೇಟೆ ಹೊಣೆ ನೀಡಲಾಗಿದೆ. ಇದೀಗ ಮಾಧುಸ್ವಾಮಿಯವರಿಗೆ ಉಪಚುನಾವಣೆಯಲ್ಲಿ ಯಾವುದೇ ಕ್ಷೇತ್ರದ ಉಸ್ತುವಾರಿ ನೀಡದಿರಲು ಪಕ್ಷ ನಿರ್ಧರಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. 

SCROLL FOR NEXT