ರಾಜ್ಯ

ದೃಷ್ಟಿ ಹೀನತೆಯನ್ನು ಮೆಟ್ಟಿ ನಿಂತು ಸಂಗೀತ ಕ್ಷೇತ್ರದಲ್ಲಿ ಕಲಾವತಿ ಸಾಧನೆ!

Nagaraja AB

ಮೈಸೂರು: ಸೋಮವಾರ ನಡೆದ  ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲಾ ವಿಶ್ವವಿದ್ಯಾಲದ ನಾಲ್ಕನೇ ಘಟಿಕೋತ್ಸವದಲ್ಲಿ ದೃಷ್ಟಿ ಹೀನ ವಿದ್ಯಾರ್ಥಿನಿ ಎಂ.ಆರ್. ಕಲಾವತಿ ಸಮಾರಂಭದ ಆಕರ್ಷಣೀಯ ಕೇಂದ್ರ ಬಿಂದುವಾಗಿದ್ದರು. 

2017-18ನೇ ಸಾಲಿನ ಬಿಎ ಹಿಂದೂಸ್ತಾನಿ ಸಂಗೀತ ಗಾಯನದಲ್ಲಿ ನಗದು ಬಹುಮಾನವನ್ನು ಪಡೆದ ಕಲಾವತಿ, ಪ್ರತಿಭೆಯಲ್ಲಿ  ಪದಕ ವಿಜೇತ ಇತರ ವಿದ್ಯಾರ್ಥಿಗಳಿಗಿಂತ ಕಡಿಮೆಯೇನೂ ಇರಲಿಲ್ಲ. ಎಲ್ಲರ ದೃಷ್ಟಿಯೂ ಈಕೆಯ ಮೇಲೆಯೇ ನೆಟ್ಟಿತ್ತು. 

ನಾಲ್ಕು ವರ್ಷಗಳ ಹಿಂದೆ ಕಾಲೇಜು ಉಪನ್ಯಾಸಕರು ಈಕೆಯಲ್ಲಿದ್ದ ಪ್ರತಿಭೆಯನ್ನು ಗುರುತಿಸಿ, ವಿಶ್ವವಿದ್ಯಾಲಯಕ್ಕೆ ಶಿಫಾರಸು ಮಾಡಿದ್ದಾರೆ.ಇದೇ ಆಕೆಯನ್ನು ಒಂದಲ್ಲಾ ಒಂದು ದಿನ ದೊಡ್ಡ ಸಂಗೀತಗಾರ್ತಿಯಾಗಬೇಕೆಂಬ ಆಸೆಗೆ ಪ್ರೇರಣೆಯಾಗಿದೆ. 

ನಂಜನಗೂಡು ತಾಲ್ಲೂಕು ಮಲ್ಲಹಳ್ಳಿಯ ರೈತ ಕುಟುಂಬದ ಕಲಾವತಿ, ಹೆಮ್ಮರಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ವ್ಯಾಸಂಗ ಮಾಡುತ್ತಿದ್ದಾಗ  ಸಮಾರಂಭ, ಪ್ರಾರ್ಥನೆಗಳಲ್ಲಿ ಗೀತ ಗಾಯನ ಮಾಡುತ್ತಿದ್ದ ಕಲಾವತಿಯಲ್ಲಿರುವ ಸಂಗೀತ ಪ್ರತಿಭೆಯನ್ನು ಉಪನ್ಯಾಸಕಿ ರಾಧಾ ಗುರುತಿಸಿ ಪ್ರೋತ್ಸಾಹಿಸಿದ್ದಾರೆ. 

ಎಸ್ ಎಸ್ ಎಲ್ ಸಿ ಮುಗಿಸಿದ ನಂತರ ಮ್ಯೂಸಿಕ್ ನಲ್ಲಿ ಡಿಪ್ಲೋಮಾ ಕೋರ್ಸಿಗೆ ಕಲಾವತಿ ಸೇರ್ಪಡೆಯಾಗಿದ್ದಾರೆ.ಈಗ ಡಿಗ್ರಿ ಮುಗಿಸಿ, ಹಿಂದೂಸ್ತಾನಿ ಸಂಗೀತ ಗಾಯನದಲ್ಲಿ ದ್ವೀತಿಯ ವರ್ಷದ  ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ.ಮೈಸೂರು ಹಾಗೂ ಬೆಂಗಳೂರಿನ ಕೆಲ ವೇದಿಕೆಯಲ್ಲಿ ಆಕೆ ಪ್ರತಿಭಾ ಅನಾವರಣ ಮಾಡಿದ್ದಾರೆ. 

ಆಕೆಗೆ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಇದ್ದರಿಂದ  ಮೊದಲಿನಿಂದಲೂ ಪ್ರೋತ್ಸಾಹಿಸಲಾಯಿತು. ನಮ್ಮ ಕುಟುಂಬದಲ್ಲಿ ಕಲಾವತಿಯೇ ಮೊದಲ ಸಂಗೀತಗಾರ್ತಿಯಾಗಿದ್ದಾರೆ ಎಂದು ಆಕೆಯ ತಂದೆ ರಾಜಪ್ಪ ತಿಳಿಸಿದ್ದಾರೆ. 

SCROLL FOR NEXT