ನೆರೆ ಪರಿಹಾರ ವಿಚಾರದಲ್ಲಿ ತಾರತಮ್ಯ: ತಮ್ಮದೇ ಪಕ್ಷದ ಕೇಂದ್ರ ನಾಯಕರ ವಿರುದ್ಧ ಬಸನ ಗೌಡ ಪಾಟೀಲ್ ಯತ್ನಾಳ್ ಕಿಡಿ
ಬೆಂಗಳೂರು: ಉತ್ತರ ಕರ್ನಾಟಕ ಪ್ರವಾಹದ ಬಗ್ಗೆ ಎರಡು ತಿಂಗಳುಗಳಿಂದ ಯಾವುದೇ ಪ್ರತಿಕ್ರಿಯೆ ನೀಡದೆ ಬಿಹಾರದ ನೆರೆ ಪರಿಹಾರಕ್ಕೆ ಎಲ್ಲಾ ರೀತಿಯ ಸಹಕಾರ ಘೋಷಣೆ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ರಾಜ್ಯದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಈ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಚ್ಚರಿಯೆಂಬಂತೆ ಇದೇ ಮೊದಲ ಬಾರಿಗೆ ಬಿಜೆಪಿ ಶಾಸಕರೊಬ್ಬರು ತಮ್ಮ ಪಕ್ಷದ ಕೇಂದ್ರ ನಾಯಕರ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಧಾನಿ ಮೋದಿಯವರ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಬಿಹಾರದ ಜನರಿಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿ ಸಾಂತ್ವನ ಹೇಳುತ್ತಾರೆ. ಆದರೆ, ನಮ್ಮ ಜನರಿಗೆ ನಾವೇನು ಹೇಳಬೇಕು? ಪ್ರವಾಹದಿಂದ ಸಂಕಷ್ಟದಲ್ಲಿರುವ ಬಿಹಾರ ರಾಜ್ಯಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡುವ ಪ್ರಧಾನಿ ಮೋದಿಯವರಿಗೆ ರಾಜ್ಯದ ಜನರು ಏನು ಮಾಡಿದ್ದಾರೆಂದು ಪ್ರಶ್ನಿಸಿದ್ದಾರೆ.
ಇಡೀ ದಕ್ಷಿಣ ಭಾರದಲ್ಲಿ ಅತೀ ಹೆಚ್ಚು 25 ಸಂಸದರನ್ನು ರಾಜ್ಯದ ಜನರು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಹೀಗೇ ಮುಂದುವರೆದರೆ ಜನರು ತಕ್ಕ ಪಾಠ ಕಲಿಸುತ್ತಾರೆ. ಎಂತೆಂಥವರನ್ನೇ ಜನರು ಮನೆಗೆ ಕಳುಹಿಸಿದ್ದಾರೆ. ಅಂತಹದ್ದರಲ್ಲಿ ಇದ್ಯಾವ ಲೆಕ್ಕ ಎಂದು ಕಿಡಿಕಾರಿದ್ದಾರೆ.
ಸೋಮವಾರ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿಯವರು, ಬಿಹಾರದ ಪ್ರವಾಹ ಪ್ರರಿಸ್ಥಿತಿ ಬಗ್ಗೆ ಸಿಎಂ ನಿತೀಶ್ ಕುಮಾರ್ ಅವರೊಡನೆ ಮಾತುಕತೆ ನಡೆಸಿದ್ದೇನೆ. ಅಗತ್ಯವಾದ ಎಲ್ಲಾ ನೆರವನ್ನೂ ನೀಡಲು ಕೇಂದ್ರ ಸರ್ಕಾರ ಸನ್ನದ್ಧವಾಗಿದೆ ಎಂದು ಹೇಳಿದ್ದರು.