ರಾಜ್ಯ

ಪರಮೇಶ್ವರ್ ಆಹ್ವಾನಿಸಿ 'ಕುರುಕ್ಷೇತ್ರ' ನಾಟಕ ಮಾಡುವ ಆಸೆಯಿಟ್ಟುಕೊಂಡಿದ್ದ: ಸ್ನೇಹಿತ ರಮೇಶ್ ನೆನೆದು ಕಣ್ಣೀರಿಟ್ಟ ಗೆಳೆಯ

Manjula VN

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರನ್ನು ಆಹ್ವಾನಿಸಿ ಹುಟ್ಟೂರಿನಲ್ಲಿ 'ಕುರುಕ್ಷೇತ್ರ' ನಾಟಕ ಮಾಡಬೇಕೆಂದು ಆಸೆ ಇಟ್ಟುಕೊಂಡಿದ್ದ ಎಂದು ತಮ್ಮ ಗೆಳೆಯ ರಮೇಶ್ ಅವರನ್ನು ಸ್ನೇಹಿತ ಪ್ರಕಾಶ್ ಅವರು ನೆನೆದು ಕಣ್ಣೀರು ಹಾಕಿದ್ದಾರೆ. 

ರಾಮನಗರ ತಾಲೂಕಿನ ಮೆಲೆಹಳ್ಳಿಯಲ್ಲಿ ಕುರುಕ್ಷೇತ್ರ ನಾಟಕ ಮಾಡಬೇಕು. ನಾಟಕದಲ್ಲಿ ಅರ್ಜುನ ಪಾತ್ರ ನಿಭಾಯಿಸಬೇಕು. ನಾಟಕಕ್ಕೆ ಪರಮೇಶ್ವರ್ ಅವರನ್ನು ಅತಿಥಿಯಾಗಿ ಆಹ್ವಾನಿಸಬೇಕೆಂದು ರಮೇಶ್ ಆಸೆ ಇಟ್ಟುಕೊಂಡಿದ್ದ. ಇದಕ್ಕೆ ಸಾಕಷ್ಟು ತಯಾರಿಯನ್ನೂ ನಡೆಸಿದ್ದ. 

ರಮೇಶ್ ಹಾಗೂ ನಾನು ರಾಮನಗರದ ಶಾಲೆಯಲ್ಲಿ 10 ತರಗತಿವರೆಗೂ ಒಟ್ಟಿಗೆ ವಿದ್ಯಾಭ್ಯಾಸ ನಡೆಸಿದ್ದೆವು. ಉದ್ಯೋಗ ಅರಸಿಕೊಂಡು ರಮೇಶ್ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದ. ರಮೇಶ್'ಗೆ ರಂಗಭೂಮಿಯಲ್ಲಿ ಸಾಕಷ್ಟು ಆಸಕ್ತಿ ಇಟ್ಟು. ಊರ ಹಬ್ಬಕ್ಕೆ ಕುರುಕ್ಷೇತ್ರ ನಾಟಕ ನಡೆಸಿ, ಅತಿಥಿಯಾಗಿ ಪರಮೇಶ್ವರ್ ಅವರನ್ನು ಆಹ್ವಾನಿಸಲು ನಿರ್ಧರಿಸಿದ್ದ. ಈ ಸಂಬಂಧ ಪರಮೇಶ್ವರ್ ಅವರ ದಿನಾಂಕ ಕೇಳಲು ನಿರ್ಧರಿಸಿದ್ದ. ಇದಲ್ಲದೆ, ನಾಟಕದಲ್ಲಿ ಅರ್ಜುನ ಪಾತ್ರ ನಿಭಾಯಿಸಲು, ನಾಟಕ್ಕೆ ಮಾರ್ಗದರ್ಶನ ನೀಡುವಂತೆ ನಿರ್ದೇಶಕ ಸಚ್ಚಿ ಅವರ ಮನವೊಲಿಸಲು ಯತ್ನ ನಡೆಸಿದ್ದ ಎಂದು ಪ್ರಕಾಶ್ ಅವರು ಗೆಳೆಯನನ್ನು ಸ್ಮರಿಸಿ ಕಣ್ಣೀರು ಹಾಕಿದ್ದಾರೆ. 

ಇದರಂತೆ ಪರಮೇಶ್ವರ್ ಅವರ ಮತ್ತೊಬ್ಬ ಸಿಬ್ಬಂದಿ, ರಮೇಶ್ ಅವರ ಗೆಳೆಯ ಕೇಶವ್ ಮಾತನಾಡಿ, ರಮೇಶ್ ಶ್ರಮದಾಯಿಕ ವ್ಯಕ್ತಿಯಾಗಿದ್ದ. ಪ್ರತೀಯೊಬ್ಬರ ಮೇಲೂ ಸಾಕಷ್ಟು ಕಾಳಜಿ ವಹಿಸುತ್ತಿದ್ದ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ತನ್ನ ಕುರಿತು ಆಕ್ಷೇಪಾರ್ಹ ಟ್ವೀಟ್ ಹಾಕಿದ್ದಕ್ಕೆ, ರಮೇಶ್ ಪ್ರತಿಕ್ರಿಯೆ ನೀಡಿದ್ದ. ಇದಕ್ಕೆ ಮತ್ತೊಬ್ಬ ವ್ಯಕ್ತಿ ನಿಂದಿಸಿದ್ದ. ಇದರಿಂದ ರಮೇಶ್ ಸಾಕಷ್ಟು ನೊಂದಿದ್ದ. ಬಳಿಕ ನಾನೇ ಆತನಿಗೆ ಸಮಾಧಾನ ಪಡಿಸಿದ್ದೆ. ರಮೇಶ್ ಸಾಕಷ್ಟು ಮುಗ್ದ ವ್ಯಕ್ತಿಯಾಗಿದ್ದರು. ಶ್ರಮದಾಯಿಕ ವ್ಯಕ್ತಿಯಾಗಿದ್ದರು. ರಮೇಶ್ ಅವರ ಕೆಲಸಕ್ಕೆ ಪರಮೇಶ್ವರ್ ಅವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದಾರೆ.

ರಮೇಶ್ ಸಹೋದ್ಯೋಗಿ ದರ್ಶನ್ ಮಾತನಾಡಿ, ಕೆಪಿಸಿಸಿ ಕಚೇರಿಯಲ್ಲಿ ಉದ್ಯೋಗ ದೊರಕಿಸಿಕೊಟ್ಟಿದ್ದ ಕಾಂಗ್ರೆಸ್ ನಾಯಕ ಜನಾರ್ಧನ ಪೂಜಾರಿಯವರನ್ನು ರಮೇಶ್ ಯಾವಾಗಲೂ ಸ್ಮರಿಸುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಪೂಜಾರಿಯವರು ಕಚೇರಿಗೆ ಬಂದಾಗ ಅವರ ಪಾದಕ್ಕೆ ನಮಸ್ಕರಿಸಿ ಧನ್ಯವಾದ ಹೇಳಿದ್ದರು. 

ಕುಟುಂಬದೊಂದಿಗೆ ಬಾಡಿಗೆ ಫ್ಲಾಟ್'ವೊಂದರಲ್ಲಿ ರಮೇಶ್ ಜೀವನ ನಡೆಸುತ್ತಿದ್ದರು. ಬಳಿಕ ಅವರ ಸಂಬಂಧಿಕರ ಸಹಾಯದೊಂದಿಗೆ ಭೂಮಿಯೊಂದನ್ನು ಖರೀದಿ ಮಾಡಿದ್ದರು. ಆ ಭೂಮಿಯಲ್ಲಿ ಮನೆಯನ್ನೂ ಕಟ್ಟಿದ್ದರು. ರಮೇಶ್ ಅತ್ಯಂತ ಸರಳ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಹಣಕ್ಕಿಂತಲೂ ಜೀವನ ಅತ್ಯಂತ ಮುಖ್ಯವಾದದ್ದು ಎಂದು ಯಾವಾಗಲೂ ಹೇಳುತ್ತಿದ್ದರು ಎಂದು ತಿಳಿಸಿದ್ದಾರೆ.  

ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ರಮೇಶ್ ಅವರು ಸ್ಟಿನೋಗ್ರಾಫರ್ ಕೋರ್ಸ್'ಗೆ ಸೇರ್ಪಡೆಗೊಂಡಿದ್ದರು. ನಂತರ ಕೆಪಿಸಿಸಿ ಕಚೇರಿಗೆ ಸೇರ್ಪಡೆಗೊಂಡಿದ್ದರು. 

SCROLL FOR NEXT