ರಾಜ್ಯ

ಮೈಸೂರು-ಬೆಂಗಳೂರು ಮಧ್ಯೆ ಮಹಿಳೆಯರಿಗೆ ವಿಶೇಷ ರೈಲು ನೀಡಿ: ಸಂಸದೆ ಸುಮಲತಾ ಮನವಿ 

Sumana Upadhyaya

ಮಂಡ್ಯ: ಪ್ರತಿನಿತ್ಯ ಉದ್ಯೋಗಕ್ಕೆ ಹೋಗುವ ಮಹಿಳೆಯರಿಗೆ ಅನುಕೂಲವಾಗಲು ಮಹಿಳೆಯರಿಗೆ ವಿಶೇಷ ರೈಲನ್ನು ಬೆಂಗಳೂರು-ಮೈಸೂರು ಮಧ್ಯೆ ಪ್ರಾರಂಭಿಸುವಂತೆ ಮಂಡ್ಯ ಕ್ಷೇತ್ರದ ಲೋಕಸಭಾ ಸದಸ್ಯೆ ಸುಮಲತಾ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.


ರಾಜ್ಯದ ಸಂಸದರು ಮತ್ತು ಉನ್ನತ ಮಟ್ಟದ ರೈಲ್ವೆ ಅಧಿಕಾರಿಗಳ ಮಧ್ಯೆ ನಿನ್ನೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಈ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಸುಮಲತಾ, ಮೈಸೂರು-ಬೆಂಗಳೂರು ಮಧ್ಯೆ ಪ್ರತಿನಿತ್ಯ ಸುಮಾರು 4 ಸಾವಿರದಿಂದ 5 ಸಾವಿರದವರೆಗೆ ಮಹಿಳೆಯರು ಉದ್ಯೋಗಕ್ಕೆ ಓಡಾಡುತ್ತಿರುತ್ತಾರೆ. ಜನದಟ್ಟಣೆ ಅವಧಿಯಲ್ಲಿ ಮಹಿಳೆಯರಿಗೆ ವಿಶೇಷ ರೈಲು ಬಿಡುಗಡೆ ಮಾಡಿದರೆ ಅವರಿಗೆ ಕೆಲಸಕ್ಕೆ ಹೋಗಲು ಅನುಕೂಲವಾಗುತ್ತದೆ. ನಾನು ಚುನಾವಣಾ ಪ್ರಚಾರ ನಡೆಸುವ ವೇಳೆ ಮಂಡ್ಯ ಜಿಲ್ಲೆಯ ಮಹಿಳೆಯರು ಈ ಬೇಡಿಕೆಯನ್ನು ನನ್ನ ಮುಂದಿಟ್ಟಿದ್ದರು. ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಸಹ ಪತ್ರ ಬರೆದಿದ್ದೇನೆ ಎಂದರು.

SCROLL FOR NEXT