ರಾಜ್ಯ

ಆನ್ ಲೈನ್, ಆಪ್ ಆಧಾರಿತ ಸಂಸ್ಥೆಗಳ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಕ್ರಮ: ಸುರೇಶ್ ಕುಮಾರ್

Lingaraj Badiger

ಬೆಂಗಳೂರು: ಆನ್ ಲೈನ್ ಅಥವಾ ಮೊಬೈಲ್ ಆಪ್ ಆಧಾರಿತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಕುರಿತು ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಾರ್ಮಿಕ ಸಚಿವ ಸುರೇಶ್ ಕುಮಾರ್ ಅವರು ಸೋಮವಾರ ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಹೊಸ ಕಾರ್ಮಿಕ ವರ್ಗ ಸೃಷ್ಟಿಯಾಗಿದ್ದು, ಅವರು ಓಲಾ, ಉಬರ್, ಸ್ವಿಗ್ಗಿ, ಝೊಮ್ಯಾಟೊ, ಪ್ಲಿಪ್ ಕಾರ್ಟ್ ಅಥವಾ ಅಮೆಜಾನ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಮಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅವರಲ್ಲಿ ಬಹುತೇಕರು ಯುವಕರಾಗಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಮಾರ್ ಅವರು, ಆನ್ ಲೈನ್ ಹಾಗೂ ಆಪ್ ಸಂಸ್ಥೆಗಳ ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಇನ್ಸೆಂಟಿವ್ ಹಾಗೂ ಇತರೆ ವಿಚಾರಗಳ ಕುರಿತು ಚರ್ಚಿಸಲಾಯಿತು ಎಂದರು.

ಆನ್ ಲೈನ್ ಹಾಗೂ ಆಪ್ ಸಂಸ್ಥೆಗಳ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಕುರಿತು ವರದಿ ಸಿದ್ಧಪಡಿಸುವ ಜವಾಬ್ದಾರಿಯನ್ನು ಕಾರ್ಮಿಕ ಇಲಾಖೆ ಉಪ ಆಯುಕ್ತ ಬಾಲಕೃಷ್ಣನ್ ಅವರಿಗೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ನವೆಂಬರ್ ಎರಡನೇ ವಾರದಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳು ಹಾಗೂ ಕಾರ್ಮಿಕ ಪ್ರತಿನಿಧಿಗಳ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಈ ಸಮಾವೇಶದಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮತ್ತಷ್ಟು ವಿಸ್ತೃತವಾಗಿ ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.

SCROLL FOR NEXT