ರಾಜ್ಯ

ಶಾಸಕ ರಾಮದಾಸ್ ಪ್ರೇಮ ಪ್ರಕರಣ: ಬಿ ರಿಪೋರ್ಟ್ ರದ್ದುಗೊಳಿಸಿ ಸಮನ್ಸ್ ಜಾರಿಗೊಳಿಸಿದ ಕೋರ್ಟ್

Lingaraj Badiger

ಬೆಂಗಳೂರು: ಪ್ರೇಮ ಕುಮಾರಿ ಎಂಬ ಮಹಿಳೆಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಎ ರಾಮದಾಸ್ ಅವರ ವಿರುದ್ಧ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ನ್ಯಾಯಾಲಯ ರದ್ದುಗೊಳಿಸಿದ್ದು, ಮಾಜಿ ಸಚಿವರಿಗೆ ಸಮನ್ಸ್ ಜಾರಿಗೊಳಿಸಿದೆ.

ರಾಮದಾಸ್ ವಿರುದ್ಧ ಪ್ರೇಮಕುಮಾರಿ 2014ರ ಫೆಬ್ರವರಿ 14ರಂದು ಮೈಸೂರಿನ ಸರಸ್ವತಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ರಾಮದಾಸ್ ವಿರುದ್ಧ ಬಿ ರಿಪೋರ್ಟ್ ಸಲ್ಲಿಸಿದ್ದರು. ಈ ಬಿ ರಿಪೋರ್ಟ್ ಅನ್ನು ಪ್ರೇಮಕುಮಾರ್ ವಿಶೇಷ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಪ್ರೇಮ ಕುಮಾರಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಬಿ ರಿಪೋರ್ಟ್ ಅನ್ನು ರದ್ದುಗೊಳಿಸಿ, ರಾಮದಾಸ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ಮಾಜಿ ಸಚಿವ ರಾಮದಾಸ್ ಅವರು ನನ್ನನ್ನು ಮದುವೆಯಾಗುವುದಾಗಿ ನಂಬಿಸಿ, ದೈಹಿಕವಾಗಿ ಬಳಸಿಕೊಂಡಿದ್ದಾರೆ. ನಂತರ ಮದುವೆ ವಿಚಾರ ಪ್ರಸ್ತಾಪಿಸಿದಾಗ ಕೊಲೆ ಬೆದರಿಕೆ ಹಾಕಿದ್ದರು ಎಂದು ಪ್ರೇಮ ಕುಮಾರಿ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ರಾಮದಾಸ್ ಕೂಡ ಪ್ರೇಮಕುಮಾರಿ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ದೂರು ದಾಖಲಿಸಿದ್ದು, ತಮ್ಮನ್ನು ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದರು ಎಂದು ಆರೋಪಿದ್ದಾರೆ. ಆ ಪ್ರಕರಣವೂ ವಿಶೇಷ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. 

SCROLL FOR NEXT