ರಾಜ್ಯ

ಮತ್ತೆ 'ನಕಲಿ ಸುಮಲತಾ'ಗಳ ಹಾವಳಿ, ಸಂಸದೆ ಸುಮಲತಾ ಸ್ಪಷ್ಟನೆ

Sumana Upadhyaya

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾಗೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ನಕಲಿ ಸುಮಲತಾಗಳ ಹಾವಳಿ ಉಂಟಾಗಿದೆ. ಅವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ರಾಜಕೀಯ ನಾಯಕರ ಬಗ್ಗೆ ಅವಹೇಳನಕಾರಿ ಟೀಕೆಗಳನ್ನು ಹಾಕುವ ಮೂಲಕ ತಮ್ಮ ಹೆಸರಿಗೆ ಮಸಿ ಬಳಿಯಲು ಕಿಡಿಗೇಳಿಗಳು ಯತ್ನಿಸುತ್ತಿದ್ದಾರೆ ಎಂದು ಸ್ವತಃ ಸುಮಲತಾ ಅವರೇ ಹೇಳಿಕೊಂಡಿದ್ದಾರೆ.


ಈ ಹಿಂದೆ ಹೈದರಾಬಾದ್ ನಲ್ಲಿ ನಟ ಚಿರಂಜೀವಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಅಂಬರೀಷ್ ಇದ್ದಾಗ ಅವರ ಜೊತೆ ಸುಮಲತಾ ಭಾಗವಹಿಸಿ ಅಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವಿಡಿಯೊವನ್ನು ಹಾಕಿ, ನೋಡಿ ನಿಮ್ಮ ಸಂಸದೆ ರಾಜ್ಯದಲ್ಲಿ ನೆರೆ ಪ್ರವಾಹ ಉಂಟಾಗಿ ಜನರು ಕಷ್ಟದಲ್ಲಿರುವಾಗ ಹೇಗೆ ಮೋಜಿ ಮಸ್ತಿ ಮಾಡುತ್ತಿದ್ದಾರೆ ಎಂದು ನೋಡಿ ಎಂದು ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಟೀಕಿಸಿದ್ದರು.


ಈ ಬಗ್ಗೆ ಸುಮಲತಾ ಅಂಬರೀಶ್ ಸೈಬರ್ ಕ್ರೈಂಗೆ ದೂರು ನೀಡಿದ್ದರು. ಆದರೂ ಮತ್ತೆ ನಕಲಿ 'ಸುಮಲತಾ' ಬಾಲ ಬಿಚ್ಚಿದ್ದಾಳೆ. ಈ ಬಾರಿ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರನ್ನು ಟೀಕಿಸಿ ಪೋಸ್ಟ್ ಮಾಡಲಾಗಿದೆ. ಡಿಕೆ ಶಿವಕುಮಾರ್ ಅವರನ್ನು ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ಬೆಂಬಲಿಸಿ ಅವರ ಪೋಟೋ ಜತೆಗೆ ನ್ಯಾಯದ ಮುಂದೆ ಎಲ್ಲರೂ ಒಂದೇ. ಅವರು ಮಾಡಿದ್ದನ್ನು ಅವರು ಅನುಭವಿಸುತ್ತಾರೆ. ಇದಕ್ಕಾಗಿ ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡುವುದು ಸರಿಯಲ್ಲ ಎಂಬ ಸ್ಟೇಟಸ್ ಹಾಕಲಾಗಿದೆ.


ಇದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಕೆಲವರು ಇದನ್ನು ಸಂಸದೆ ಸುಮಲತಾ ಅಂಬರೀಶ್ ಅವರೇ ಮಾಡಿದ್ದಾರೆಂದು ನಂಬಿದ್ದಾರೆ, ಅಷ್ಟೇ ಅಲ್ಲದೇ ಅವರಿಗೆ ಹಿಗ್ಗಾಮುಗ್ಗಾ ಬೈದಿದ್ದಾರೆ. 

ಇದು ಸಂಸದೆ ಸುಮಲತಾ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ನಕಲಿ ಖಾತೆ ಸೃಷ್ಟಿ ಮಾಡಿ ಸ್ಟೇಟಸ್ ಹಾಕಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. 

SCROLL FOR NEXT