ರಾಜ್ಯ

'ಕಿಕ್' ಕೊಡದ ಮದ್ಯ; ಶಿವಮೊಗ್ಗದಲ್ಲಿ ಲಿಕ್ಕರ್ ಮಾರಾಟದಲ್ಲಿ ಭಾರೀ ಇಳಿಕೆ 

Sumana Upadhyaya

ಶಿವಮೊಗ್ಗ: ಯಾವುದಕ್ಕೆ ದುಡ್ಡು ಇಲ್ಲದಿದ್ರೂ ಕೂಡ ಕುಡಿಯುವವರ ಸಂಖ್ಯೆ ಕಡಿಮೆಯಾಗೋದಿಲ್ಲ, ಕುಡಿಯೋರಿಗೆ ದುಡ್ಡು ಎಲ್ಲಿಂದ ಬರುತ್ತಪ್ಪ ಅಂತ ಹೇಳೋರನ್ನು ನಾವು ಕೇಳಿದ್ದೇವೆ. ಬಾರ್ ಗಳ ಮುಂದೆ ಯಾವಾಗಲೂ ಜನ ನಿಂತಿರುತ್ತಾರೆ. ಆದರೆ ಶಿವಮೊಗ್ಗದಲ್ಲಿ ಮಾತ್ರ ಪರಿಸ್ಥಿತಿ ಈ ಬಾರಿ ಭಿನ್ನವಾಗಿದೆ.

ಜಿಲ್ಲೆಯಲ್ಲಿ ಈ ವರ್ಷ ಮದ್ಯ ಮಾರಾಟದಲ್ಲಿ ಭಾರೀ ಇಳಿಮುಖವಾಗಿದೆ. ಆರ್ಥಿಕ ಹಿಂಜರಿತ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಇದು ಜನರ ಆದಾಯದ ಮೇಲೆ ಪರಿಣಾಮ ಬೀರಿದೆ. ಈ ಬಾರಿಯ ಮಳೆ ಮತ್ತು ಪ್ರವಾಹ ಕೂಡ ಮದ್ಯ ಮಾರಾಟದ ಮೇಲೆ ಹೊಡೆತ ಬಿದ್ದಿದೆ.


ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿವೆ, ಹಲವು ಕುಶಲಕರ್ಮಿ ಉದ್ಯೋಗಗಳು ಕೂಡ ಇವೆ. ಆಗ್ರೊ, ಆಟೊಮೊಬೈಲ್, ಎಂಜಿನಿಯರಿಂಗ್, ರಿಪೇರಿ ಮತ್ತು ಸೇವಾ ಉದ್ಯಮಗಳು ಇಲ್ಲಿ ಹೆಚ್ಚಾಗಿವೆ. ಆಟೊಮೊಬೈಲ್ ಮತ್ತು ಎಂಜಿನಿಯರಿಂಗ್ ಕೈಗಾರಿಕೆಗಳು ಪ್ರಮುಖವಾಗಿವೆ. ಆರ್ಥಿಕ ಹಿಂಜರಿತ ಈ ಕೈಗಾರಿಕೋದ್ಯಮಗಳ ಮೇಲೆ ತೀವ್ರ ಪರಿಣಾಮ ಬೀರಿದ್ದು ಕೆಲವು ಉದ್ಯಮಗಳನ್ನು ಮುಚ್ಚುವ ಅಥವಾ ಕಾರ್ಮಿಕರ ಸಂಖ್ಯೆಯನ್ನು ಕಡಿತ ಮಾಡುವ ಪರಿಸ್ಥಿತಿ ಬಂದಿದೆ.


ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಮೊಗ್ಗ ತಾಲ್ಲೂಕು ವೈನ್ ವ್ಯಾಪಾರಿಗಳ ಒಕ್ಕೂಟ ಅಧ್ಯಕ್ಷ ಸಿ ಎಂ ಗೌಡ, ಮದ್ಯ ಮಾರಾಟದಲ್ಲಿ ಕಳೆದ ಮೂರು ತಿಂಗಳಿನಿಂದ ಇಳಿಕೆ ಕಂಡುಬಂದಿರುವುದರಿಂದ ಮದ್ಯದಂಗಡಿಗಳು ನಷ್ಟವನ್ನು ಅನುಭವಿಸುತ್ತಿವೆ. ಇದಕ್ಕೆ ಕಾರಣ ಜನರ ಬಳಿ ಹಣ ಇಲ್ಲದಿರುವುದು ಎಂದರು.


ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದಾಗಿ ಹಲವು ವಲಯಗಳಲ್ಲಿ ಇಂದು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೂಡ ಹಲವರಿಗೆ ಇದರ ಹೊಡೆತ ಬಿದ್ದಿದೆ. ಹಲವರಿಗೆ ಮಾಡಲು ಕೆಲಸವೇ ಇಲ್ಲದಾಗಿ ಹೊಸ ಉದ್ಯೋಗ ಹುಡುಕುವುದರಲ್ಲಿ ನಿರತರಾಗಿದ್ದಾರೆ. ಬರಗಾಲ ಮತ್ತು ಪ್ರವಾಹದಿಂದ ಕೃಷಿಕರಿಗೆ ಕೂಡ ತೊಂದರೆಯಾಗಿದೆ. ಮೆಣಸು ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆಯಬೇಕಾಗಿತ್ತು. ಆದರೆ ಈ ವರ್ಷ ರೈತರಿಗೆ ನಷ್ಟವುಂಟಾಗಿದ್ದು ಮದ್ಯ ಕುಡಿಯಲು ಸಹ ಹಣವಿಲ್ಲದಂತಾಗಿದೆ. ಹೀಗಾಗಿ ನಮ್ಮ ವ್ಯಾಪಾರ ಶೇಕಡಾ 50ರಷ್ಟು ಕಡಿಮೆಯಾಗಿದೆ ಎಂದರು.


ಆದರೆ ಸರ್ಕಾರದ ಅಧಿಕಾರಿಗಳು ಬೇರೆಯದೇ ಚಿತ್ರಣ ತೋರಿಸುತ್ತಾರೆ. ಈ ವರ್ಷ ಮದ್ಯ ಮಾರಾಟದ ನಿಗದಿತ ಗುರಿಯನ್ನು ತಲುಪದಿದ್ದರೂ ಕೂಡ ಮಂದಗತಿಯಲ್ಲಿ ಮಾರಾಟದಲ್ಲಿ ಏರಿಕೆಯಿದೆ. ಅಬಕಾರಿ ಇಲಾಖೆ ಶೇಕಡಾ 20ರಷ್ಟು ಮಾರಾಟದ ಏರಿಕೆ ಗುರಿಯನ್ನು ಹೊಂದಿದ್ದರೂ ಕೂಡ ಅದು ಈ ವರ್ಷ ಕೇವಲ ಶೇಕಡಾ 8ರಷ್ಟಾಗಿದೆ. ಏಪ್ರಿಲ್ ನಿಂದ ಆಗಸ್ಟ್ ವರೆಗೆ ಒಟ್ಟು 7 ಲಕ್ಷದ 88 ಸಾವಿರದ 414 ಬಾಟಲ್ ಗಳು ಮಾರಾಟವಾಗಿದೆ. ನಿಗದಿತ ಗುರಿಯಿಂದ 19 ಸಾವಿರದ 414 ಬಾಟಲ್ ಗಳ ಮಾರಾಟ ಕಡಿಮೆಯಾಗಿದೆ.


ಬಿಯರ್ ಮಾರಾಟದಲ್ಲಿ ಹೆಚ್ಚಳವಾಗಿದ್ದು ಕಳೆದ ವರ್ಷಕ್ಕಿಂತ 12 ಸಾವಿರದ 377 ಬಾಟಲ್ ಗಳು ಈ ವರ್ಷ ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯಲ್ಲಿ ಮಾರಾಟವಾಗಿದೆ. 

SCROLL FOR NEXT