ರಾಜ್ಯ

ನೆರೆ ಪೀಡಿತರ ಸಮಸ್ಯೆ ಪರಿಹರಿಸಲು ಬದ್ಧ-ಶಶಿಕಲಾ ಜೊಲ್ಲೆ, ಸಿಎಂ ಸಭೆಗೆ ಕತ್ತಿ, ಸವದಿ, ಜಾರಕಿಹೊಳಿ ಗೈರು

Raghavendra Adiga

ಬೆಂಗಳೂರು: ನೆರೆಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಾಚರಣೆಗೆ ಹಣ ಸಾಲದೇ ಇದ್ದಲ್ಲಿ ಯಾವ ರೀತಿ ಫಂಡ್ ತರಬೇಕು ಹೇಗೆ ಹಣಕಾಸು ವ್ಯವಸ್ಥೆ ಮಾಡಬೇಕು ಎನ್ನುವ ಚಿಂತನೆ ಮಾಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಕಲಾ‌ ಜೊಲ್ಲೆ ಹೇಳಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಗಾವಿ ಜಿಲ್ಲಾ ಬಿಜೆಪಿ ಶಾಸಕರ ಜೊತೆ ಸಿಎಂ ಸಭೆ ನಡೆಸಿದರು. ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಪಿ.ರಾಜೀವ್ ಸೇರಿದಂತೆ ಬಹುತೇಕ ಪಕ್ಷದ ಶಾಸಕರು, ಕಂದಾಯ ಸಚಿವ ಆರ್.ಅಶೋಕ್, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಡಿಸಿಎಂ ಗೋವಿಂದ ಕಾರಜೋಳ ಭಾಗಿಯಾಗಿದ್ದರು. ಬೆಳಗಾವಿ ಜಿಲ್ಲಾ ಶಾಸಕರ ಸಭೆಗೆ ಉಮೇಶ್ ಕತ್ತಿ ಗೈರಾಗಿದ್ದರು.

ಸಚಿವ ಸ್ಥಾನ ಸಿಗದ ಹಿನ್ನಲೆ ಅಸಮಧಾನಗೊಂಡಿರುವ ಕತ್ತಿ, ಬೆಳಗಾವಿ ಜಿಲ್ಲಾ ನೆರೆಪೀಡಿದ ಪ್ರದೇಶಗಳ ಸಿಎಂ ಭೇಟಿ ವೇಳೆಯೂ ಗೈರಾಗಿದ್ದರು. ಬಾಲಚಂದ್ರ ಜಾರಕಿಹೊಳಿ ಕೂಡ ಸಭೆಯಿಂದ ದೂರ ಉಳಿದು ಅಚ್ಚರಿ ಮೂಡಿಸಿದರು. ದೆಹಲಿ ಪ್ರವಾಸದ ಕಾರಣ ಡಿಸಿಎಂ ಲಕ್ಷ್ಮಣ ಸವದಿ ಕೂಡ ಗೈರಾಗಿದ್ದರು, ಇದರ ಜೊತೆ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಸಭೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ಬೆಳಗಾವಿಯಲ್ಲಿ ಪ್ರವಾಹದಿಂದ ಆಗಿರುವ ನಷ್ಟ ಹಾಗೂ ಪರಿಹಾರದ ವಿಷಯದ ಕುರಿತು ಚರ್ಚೆ ಅಲ್ಲದೆ ಶಾಸಕರ ಕ್ಷೇತ್ರಗಳ ಕುಂದುಕೊರತೆಗಳ ಬಗ್ಗೆಯೂ ಸಿಎಂ ಬಿಎಸ್‌ ಯಡಿಯೂರಪ್ಪ ಚರ್ಚೆ ನಡೆಸಿದರು. ಶಾಸಕರ ಸಮಸ್ಯೆಗಳನ್ನು ಆಲಿಸುವ ಮೂಲಕ ಶಾಸಕರನ್ನು‌ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಿಎಂ ಬಿಎಸ್‌ವೈ ಯತ್ನಿಸಿದರು.

ಸಭೆ ಬಳಿಕ ಮಾತನಾಡಿದ ಸಚಿವೆ ಶಶಿಕಲಾ‌ ಜೊಲ್ಲೆ, ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಶಾಸಕರ ಸಭೆಯನ್ನು ಸಿಎಂ ನಡೆಸಿದರು. ಪ್ರತಿ ಕ್ಷೇತ್ರದ ಸಮಸ್ಯೆಗಳನ್ನು ತಿಳಿದುಕೊಂಡು ಯಾವ ರೀತಿ ಮುಂದೆ ಹೆಜ್ಜೆ ಇಡಬೇಕೆಂದು ಚರ್ಚಿಸಲಾಯಿತು. ಎಲ್ಲಾ ಶಾಸಕರು ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿ, ಎಲ್ಲೆಲ್ಲಿ ಕಾಮಗಾರಿಗಳು ನಿಂತಿವೆ ಎನ್ನುವ ಬಗ್ಗೆ ಚರ್ಚೆ ನಡೆಸಿದರು. ಪ್ರವಾಹ ಸಂತ್ರಸ್ತರಿಗೆ ನ್ಯಾಯ ಕೊಡುವ ನಿಟ್ಟಿನಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂದು ಚರ್ಚೆ ನಡೆಯಿತು. ಮುಖ್ಯಮಂತ್ರಿಗಳು ನಮಗೆ ಉತ್ತಮ ರೀತಿಯಲ್ಲಿ ಸ್ಪಂಧನೆ ಕೊಟ್ಟಿದ್ದಾರೆ ಎಂದರು.

ಬೆಳಗಾವಿಯ ಎಲ್ಲಾ ಶಾಸಕರಿಗೂ ಇಂದಿನ ಸಭೆಗೆ ಆಹ್ವಾನ ನೀಡಲಾಗಿತ್ತು. ಆದರೂ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ ವೈಯಕ್ತಿಕ ಕಾರ್ಯಕ್ರಮಗಳ ಕಾರಣಗಳಿಂದ ಬಂದಿಲ್ಲವೋ ಅಥವಾ ಬೇರೆ ಕಾರಣವುದೆಯೋ ಗೊತ್ತಿಲ್ಲ ಎಂದು ಹಿರಿಯ ನಾಯಕರ ಗೈರಿಗೆ ಸ್ಪಷ್ಟೀಕರಣ ನೀಡಿದರು.

ನೆರೆಹಾನಿ ಸಂಬಂಧ ಈ ಬಾರಿ ಬಹಳಷ್ಟು ಸ್ಪಂಧಿಸುವ ಕೆಲಸವನ್ನು ಸರ್ಕಾರ ಮಾಡಿದೆ. ನಾನು ಕೂಡ ನೆರೆ ಪೀಡಿತ ಪ್ರದೇಶದಿಂದ ಬಂದಿದ್ದೇನೆ. ನೆರೆಪೀಡಿತರ‌ ಕುಟುಂಬಕ್ಕೆ ತಕ್ಷಣವೇ ಹತ್ತು ಸಾವಿರ ರೂ.ಗಳನ್ನು ತಲುಪಿಸಲಾಗುತ್ತದೆ. ಮನೆಗಳನ್ನು ಕಟ್ಟಿಸಿ ಕೊಡಲು ಐದು ಲಕ್ಷ ರೂಪಾಯಿಗಳ ಹೇಳಿಕೆಯನ್ನು ಮುಖ್ಯಮಂತ್ರಿಗಳು ಈಗಾಗಲೇ ನೀಡಿದ್ದಾರೆ. ಮನೆ ಕಟ್ಟಲು ಪಾಯ ಹಾಕಲು ಒಂದು ಲಕ್ಷ ರೂಗಳನ್ನು ಬಿಡುಗಡೆ ಮಾಡಲಾಗಿದೆ. ಕಂದಾಯ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ಈ ಸಂಬಂಧ ಅಶೋಕ್ ಕೂಡ ಭರವಸೆ ನೀಡಿದ್ದಾರೆ. ಯಾವುದೇ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ ಎಂದರು.

ಪರಿಹಾರ ಕಾರ್ಯಾಚರಣೆಗೆ ಹಣ ಸಾಕಾಗದೆ ಇದ್ದರೂ ಯಾವ ರೀತಿ ಹಣ ಹೊಂದಿಸಬೇಕು ಎನ್ನುವ ಕುರಿತು ಚಿಂತನೆ ಮಾಡುತ್ತಿದ್ದೇವೆ ಎಂದರು.

SCROLL FOR NEXT