ರಾಜ್ಯ

ಆನ್'ಲೈನ್'ನಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ: ಹೈಕೋರ್ಟ್

Manjula VN

ಬೆಂಗಳೂರು: ಕರ್ನಾಟಕ ಅಬಕಾರಿ ಕಾಯ್ದೆ 1965ರ ಅಡಿ ಅನುಮತಿ ಅಥವಾ ಪರವಾನಗಿ ನೀಡದ ಹೊರತು ಆನ್'ಲೈನ್ ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಬುಧವಾರ ಆದೇಶಿಸಿದೆ. 

ಆನ್'ಲೈನ್ ಮದ್ಯ ಮಾರಾಟಕ್ಕೆ ನೀಡಿದ್ದ ಅನುಮತಿ ಪತ್ರ ಹಿಂಪಡೆದ ಅಬಕಾರಿ ಇಲಾಖೆಯ ಆಯುಕ್ತರ ಕ್ರಮ ಪ್ರಶ್ನಿಸಿ ನಗರದಲ್ಲಿರುವ ಚೆನ್ನೈ ಮೂಲದ ಹೆಚ್ಐಪಿ ಬಾರ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಸ್.ಸುಜಾತಾ ಅವರಿದ್ದ ಪೀಠ, ಆನ್'ಲೈನ್ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ನಿರಾಕರಿಸಿದೆ. 

ಮದ್ಯವು ಮಾನವನ ಆರೋಗ್ಯಕ್ಕೆ ಹಾನಿಕಾರ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಕುಟುಂಬಗಳು ಹಾಗೂ ಸಮಾಜಕ್ಕೆ ಕಳಂಕವಾಗಿದೆ. ಆನ್'ಲೈನ್ ಮಾರಾಟದಿಂದ ಅಪ್ರಾಪ್ತರು ಸೇರಿ ಮದ್ಯಪಾನದ ಚಟಕ್ಕೆ ದಾಸರಾಗುವ ಯುವಪೀಳಿಗೆಯ ನಿಯಂತ್ರಣ ಸಾಧ್ಯವಿಲ್ಲ. ಆನ್'ಲೈನ್ ನಲ್ಲಿ ಮದ್ಯ ಖರೀದಿಸುವವರ ವಯಸ್ಸು ಗುರುತಿಸುವುದು ಹಾಗೂ ವಹಿವಾಟಿನ ಮೇಲ್ವಿಚಾರಣೆ ನಡೆಸಿರುವುದು ಕಷ್ಟವಾಗಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 
 
ಆನ್'ಲೈನ್ ಮದ್ಯ ಮಾರಾಟಕ್ಕೆ ಯಾವುದೇ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಶೋಕಾಸ್ ನೋಟಿಸ್ ನೀಡದೆ ಏಕಾಏಕಿ ಅನುಮತಿ ಪತ್ರ ವಾಪಸ್ ಪಡೆದಿರುವ ಅಬಕಾರಿ ಇಲಾಖೆ ಆಯುಕ್ತರ ಕ್ರಮ ಕಾನೂನು ಬಾಹಿರವಾಗಿದೆ. ನಮ್ಮ ವಹಿವಾಟಿನಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿರುವುದು ಸಂವಿಧಾನದ ಕಲಂ 14 ಮತ್ತು 19(1) (ಜಿ) ಅಡಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರ ಸಂಸ್ಥೆ ವಾದಿಸಿತ್ತು. 

ಅರ್ಜಿದಾರರ ಪರ ಹಿರಿಯ ವಕೀಲರಾದ ಪಿ.ಚಿದಂಬರಂ ಮತ್ತು ಧ್ಯಾನ್ ಚಿನ್ನಪ್ಪ ಹಾಗೂ ಸರ್ಕಾರದ ಪರ ಹಿಂದಿನ ಅಡ್ವೋಕೇಟ್ ಜನರಲ್ ಉದಯಹೊಳ್ಳ ವಾದ ಮಂಡಿಸಿದ್ದರು. 

SCROLL FOR NEXT