ರಾಜ್ಯ

ಹುಟ್ಟುಹಬ್ಬ ಹಿನ್ನೆಲೆ ಪ್ರಧಾನಿ ಮೋದಿ ಕೊಂಡಾಡಿದ ದೇಶಪಾಂಡೆ: ಸಿಡಿಮಿಡಿಗೊಂಡ ಕಾಂಗ್ರೆಸ್ ಹೈ ಕಮಾಂಡ್ 

Manjula VN

ಚುನಾವಣೆ ಬಂದಾಗ ಮಾತ್ರ ಹೋರಾಟ, ಮುಗಿದ ಬಳಿಕ ಎಲ್ಲರೂ ಒಂದೇ: ಆರ್.ವಿ.ದೇಶಪಾಂಡೆ
ಬೆಂಗಳೂರು:
ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕೊಂಡಾಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ಆರ್.ವಿ.ದೇಶಪಾಂಡೆಯವರ ಮೇಲೆ ಕಾಂಗ್ರೆಸ್ ಹೈಕಮಾಂಡ್ ಕೆಂಗಣ್ಣು ಬೀರಿದೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದ ಆರ್.ವಿ.ದೇಶಪಾಂಡೆಯವರು, ಪ್ರಧಾನಿ ಮೋದಿಯವರ 69ನೇ ಜನ್ಮದಿನಾಚರಣೆಗೆ ಶುಭಾಶಯಗಳನ್ನು ಕೋರಿದ್ದರು. ಶುಭಾಶಯಗಳೊಂದಿಗೆ ಪ್ರಧಾನಿ ಮೋದಿಯವರನ್ನು ಕೊಂಡಾಡಿದ್ದರು. 

ಗೌರವಾನ್ವಿತ ಪ್ರಧಾನಿ ಮೋದಿಯವರಿಗೆ 69ನೇ ಹುಟ್ಟುಹಬ್ಬದ ಶುಭಾಶಯಗಳು. ಮೋದಿಯವರ ವರ್ಚಸ್ವಿ ವ್ಯಕ್ತಿತ್ವ ಹಾಗೂ ಅವರ ಶಕ್ತಿ ಶ್ಲಾಘನೀಯ. ಭಾರತದ ವರ್ಚಸ್ಸಿಗೆ ಬಲ ತುಂಬಿದಕ್ಕೆ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತು ರಾಜಕೀಯದಲ್ಲಿ ಭಾರತದ ಪ್ರಾಮುಖ್ಯತೆಯನ್ನು ವಿಶ್ವದ ನಾಯಕರು ಗುರುತಿಸುವಂತೆ ಮತಾಡಿದ್ದಾರೆ. ದೇವರು ಮೋದಿಯವರಿಗೆ ದೀರ್ಘಾಯುಷ್ಯ ಹಾಗೂ ಮತ್ತಷ್ಟು ಶಕ್ತಿ ಕೊಡಲಿ, ಒಳ್ಳೆಯದು ಮಾಡಲಿ ಎಂದು ಕೋರುತ್ತನೆಂದು ಹೇಳಿದ್ದರು. 

ದೇಶಪಾಂಡೆಯವರು ಮೋದಿಯವರನ್ನು ಕೊಂಡಾಡಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ. ಇನ್ನು ಈ ಬಗ್ಗೆ ಕಾಂಗ್ರೆಸ್ ನಾಯಕರು ಮಾತ್ರ ತುಟಿಬಿಚ್ಚಿ ಯಾವುದೇ ಪ್ರತಿಕ್ರಿಯೆಗಳನ್ನೂ ನೀಡುತ್ತಿಲ್ಲ. 

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ದೇಶಪಾಂಡೆಯವರು, ನಾನು ಯಾವ ತಪ್ಪು ಮಾಡಿದೆ? ನಾವೆಲ್ಲರೂ ಮನುಷ್ಯರಷ್ಟೇ. ಹಲವು ವರ್ಷಗಳಿಂದಲೂ ನಾನು ರಾಜಕೀಯದಲ್ಲಿದ್ದೇನೆ. ಚುನಾವಣೆ ಬಂದಾಗ ರಾಜಕೀಯವಾಗಿ ಹೋರಾಡುತ್ತೇವೆ. ಚುನಾವಣೆ ಬಳಿಕ ಯಾವುದೇ ರಾಜಕೀಯವಿಲ್ಲ. ನನ್ನ ಕ್ಷೇತ್ರದಲ್ಲಿರುವ ಎಲ್ಲರೂ ನನ್ನ ಬಳಿ ಬರುತ್ತಾರೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿಗೆ ಸೇರಿದವರೆಲ್ಲರೂ ಬರುತ್ತಾರೆ. ಅವರಿಗೆ ನಾನು ಸಹಾಯ ಮಾಡುತ್ತೇನೆ. ವೈಯಕ್ತಿಕ ಜೀವನದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ದೇವೇಗೌಡ ಅವರಿಗೂ ಶುಭಾಶಯ ಕೋರುತ್ತೇನೆಂದು ಹೇಳಿದ್ದಾರೆ. 

SCROLL FOR NEXT