ರಾಜ್ಯ

ದಸರಾ ಆಚರಣೆಗಿಂತ ನೆರೆ ಪರಿಹಾರಕಾರ್ಯ ಮುಖ್ಯ; ಶ್ರೀನಿವಾಸ್ಪ್ರಸಾದ್  

Srinivas Rao BV

ಮೈಸೂರು: ಉತ್ತರ ಕರ್ನಾಟಕದ ಜನರು ನೆರೆ ಹಾವಳಿಯ ಪರಿಣಾಮಗಳಿಂದ ಬಳಲುತ್ತಿರುವಾಗ, ವಿಜೃಂಭಣೆಯ ದಸರಾ ಆಚರಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಬಿಜೆಪಿ ಉಪಾಧ್ಯಕ್ಷ  ಹಾಗೂ ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ ಪ್ರಶ್ನಿಸಿದ್ದಾರೆ. 
  
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಪೀಡಿತ ಪ್ರದೇಶಗಳಿಗೆ ತುರ್ತು ಗಮನ ನೀಡುವ ಅಗತ್ಯವಿದೆ. ನೆರೆಯಿಂದ ರಾಜ್ಯದ ಸುಮಾರು 22 ಜಿಲ್ಲೆಗಳ ಜನರು ಮನೆ, ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ದಸರಾ ಉತ್ಸವಕ್ಕಾಗಿ ಮೈಸೂರು ನಗರದಾದ್ಯಂತ ದೀಪಾಲಂಕಾರ ಮಾಡುವ ಅಗತ್ಯವಿತ್ತೇ ಎಂದು ಪ್ರಶ್ನಿಸಿದ್ದಾರೆ. 
  
ದಸರಾ ಹಬ್ಬ ಜನರ ಹಬ್ಬವಾಗಿದ್ದು, ಜನರು ತೊಂದರೆಯಲ್ಲಿರುವ ಸಂದರ್ಭದಲ್ಲಿ ವಿಜೃಂಭಣೆಯ ಆಚರಣೆ ಬೇಡ. ಸರಳವಾಗಿ ಆಚರಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮನವಿ ಮಾಡಿದರು. 
  
ಎಸ್.ಆರ್. ವಿಶ್ವನಾಥ್ ಅವರೊಂದಿಗಿನ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ತಾವೋರ್ವ ಹಿರಿಯ ರಾಜಕಾರಣಿ. ಹಾಗಾಗಿ ಅವರು ತಮ್ಮ ಬಳಿ ಚುನಾವಣೆ ಮತ್ತು ಇತರ ವಿಷಯಗಳ ಕುರಿತು ಸಲಹೆ ಕೇಳಿದರು ಎಂದರು. ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರ ಪರವಾಗಿ ತೀರ್ಪು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಉಪಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. 15 ಸ್ಥಾನಗಳನ್ನೂ ಗೆಲ್ಲುವ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಪ್ರಸಾದ್, ಅವರು 60 ದಿನಗಳ ಹಿಂದೆ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ನೆನಪು ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು. ಜೊತೆಗೆ, ಎರಡು ತಿಂಗಳ ಹಿಂದಷ್ಟೇ ಮಿತ್ರರಂತೆ ಬಿಂಬಿಸಿಕೊಂಡಿದ್ದ ಪಕ್ಷಗಳು ಇಂದು ಪರಸ್ಪರ ಕಿತ್ತಾಡುತ್ತಿವೆ ಎಂದು ಲೇವಡಿ ಮಾಡಿದರು.

SCROLL FOR NEXT