ರಾಜ್ಯ

5 ವರ್ಷಗಳಲ್ಲಿ ಎರಡನೇ ಬಾರಿ ಕಳ್ಳತನ; ಹೊನ್ನಾಳಿಯ ಕರ್ನಾಟಕ ಬ್ಯಾಂಕ್ ನಿಂದ ನಗದು, ಉಪಕರಣಗಳ ಲೂಟಿ

Sumana Upadhyaya

ದಾವಣಗೆರೆ: ಕಳೆದ ಮಂಗಳವಾರ ರಾತ್ರಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಅರಕೆರೆ ಗ್ರಾಮದ ಕರ್ನಾಟಕ ಬ್ಯಾಂಕ್ ನಲ್ಲಿ ದರೋಡೆಯಾಗಿದೆ. ದರೋಡೆಕೋರರು 13 ಸಾವಿರದ 241 ರೂಪಾಯಿ ನಗದು, ಒಂದು ಕಂಪ್ಯೂಟರ್ ಮತ್ತು ಐದು ಸಿಸಿಟಿವಿ ಕ್ಯಾಮರಾಗಳನ್ನು ಎಗರಿಸಿದ್ದಾರೆ. ಬ್ಯಾಂಕಿನ ಲಾಕರ್ ತೆಗೆಯಲು ಮಾತ್ರ ವಿಫಲರಾಗಿದ್ದಾರೆ.


ಇದೇ ಬ್ಯಾಂಕಿನಲ್ಲಿ 5 ವರ್ಷಗಳ ಹಿಂದೆ ಕೂಡ ಕಳ್ಳತನವಾಗಿತ್ತು. ಆದರೆ ಪೊಲೀಸರು ಆ ಪ್ರಕರಣವನ್ನು ಬೇಧಿಸುವಲ್ಲಿ ಇಲ್ಲಿಯವರೆಗೆ ವಿಫಲರಾಗಿದ್ದಾರೆ.


ಬ್ಯಾಂಕ್ ಮ್ಯಾನೇಜರ್ ನಾರಾಯಣ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಕಳೆದ ಸೆಪ್ಟೆಂಬರ್ 24ರಂದು ಬ್ಯಾಂಕಿನ ಎಲ್ಲ ವಹಿವಾಟುಗಳನ್ನು ಮುಗಿಸಿ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಬೀಗ ಹಾಕಿ ಎಲ್ಲ ಸಿಬ್ಬಂದಿ ಸಾಯಂಕಾಲ ಹೊರಟುಹೋಗಿದ್ದರು. ಮರುದಿನ ಬುಧವಾರ ಬೆಳಗ್ಗೆ ಬ್ಯಾಂಕಿನ ವಿಶೇಷ ಸಹಾಯಕ ಆದಿತ್ಯ ವಾಲ್ವೇಕರ್ ನನಗೆ ಕರೆ ಮಾಡಿ ಬ್ಯಾಂಕಿನ ಬಾಗಿಲು ಮುರಿದು ಒಳನುಗ್ಗಿ ಯಾರೋ ದರೋಡೆ ಮಾಡಿದ್ದಾರೆ ಎಂದು ತಿಳಿಸಿದರು. ಕೂಡಲೇ ನಾನು ಬ್ಯಾಂಕಿಗೆ ಹೋಗಿ ನೋಡಿದಾಗ ಪಕ್ಕದ ಮನೆಯ ಗೋಡೆ ಕೊರೆದು ಆ ಮೂಲಕ ಬ್ಯಾಂಕಿನ ಒಳನುಗ್ಗಿ ಕಳ್ಳರು ಬಂದಂತೆ ಕಂಡುಬಂತು ಎಂದು ತಿಳಿಸಿದ್ದಾರೆ.


ಬ್ಯಾಂಕಿನ ಲಾಕರ್ ತೆರೆಯಲು ಸಾಧ್ಯವಾಗದಾಗ ದರೋಡೆಕೋರರು ಸುಮಾರು 6 ಸಾವಿರ ರೂಪಾಯಿ ಬೆಲೆ ಬಾಳುವ ಕಂಪ್ಯೂಟರ್, 20 ಸಾವಿರ ಬೆಲೆಬಾಳುವ 5 ಸಿಸಿಟಿವಿ ಕ್ಯಾಮರಾ, 15 ಸಾವಿರ ರೂಪಾಯಿ ಮೌಲ್ಯದ ಒಂದು ರೂಟರ್ ಮತ್ತು 13 ಸಾವಿರದ 241 ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ.


2014ರಲ್ಲಿ ಕೂಡ ಈ ಬ್ಯಾಂಕಿನಲ್ಲಿ ಕಳ್ಳತನವಾಗಿ ಸುಮಾರು 2.51 ಲಕ್ಷ ರೂಪಾಯಿ ನಗದು ಮತ್ತು 12 ಕೆಜಿ ಮೌಲ್ಯದ ಚಿನ್ನಾಭರಣ ದರೋಡೆಯಾಗಿತ್ತು. ಆರೋಪಿಗಳು ಯಾರೆಂದು ಇನ್ನೂ ಪತ್ತೆಯಾಗಿಲ್ಲ. 


ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ದಾವಣಗೆರೆ ಎಸ್ಪಿ ಹನುಮಂತರಾಯ, ವೃತ್ತಿಪರ ದರೋಡೆಕೋರರ ಗುಂಪು ಈ ಕಳವಿನ ಹಿಂದೆ ಇದ್ದಂತೆ ಕಂಡುಬರುತ್ತಿದೆ. ಎರಡೂ ಕೇಸುಗಳನ್ನು ತನಿಖೆ ಮಾಡಲು ವಿಶೇಷ ತಂಡ ರಚಿಸುತ್ತೇವೆ. ವಿಧಿವಿಜ್ಞಾನ ಪ್ರಯೋಗಾಲಯದ ಸಹಾಯದಿಂದ ಪೊಲೀಸರು ತನಿಖೆ ನಡೆಸಲಿದ್ದಾರೆ. ಹಿಂದಿನ ಮತ್ತು ಈಗಿನ ದರೋಡೆಯನ್ನು ಒಂದೇ ಗ್ಯಾಂಗ್ ನವರು ಮಾಡಿರಬಹುದೇ ಎಂಬ ಸಂಶಯ ನಮಗೆ ಬರುತ್ತಿದೆ ಎಂದಿದ್ದಾರೆ.

SCROLL FOR NEXT