ರಾಜ್ಯ

ಕಿಡಿಗೇಡಿಗಳಿಂದ ತಪ್ಪಿಸಿಕೊಂಡು ಠಾಣೆಗೆ ಓಡಿ ಹೋದ ಎಎಸ್ಐ

Srinivasamurthy VN

ಚಿಕ್ಕಬಳ್ಳಾಪುರ: ಸೀಟ್ ಬೆಲ್ಟ್ ಹಾಕಿಕೊಳ್ಳದ ಕಾರು ಚಾಲಕನೊಬ್ಬನಿಗೆ ದಂಡ ವಿಧಿಸಿದ್ದಕ್ಕೆ ಕಿಡಿಗೇಡಿಗಳ ತಂಡವೊಂದು  ಪೊಲೀಸ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಕ್ಕೆ ಅವರಿಂದ ತಪ್ಪಿಸಿಕೊಳ್ಳಲು ಎಎಸ್‍ಐ, ಪೊಲೀಸ್ ಠಾಣೆಗೆ ಓಡಿ ಹೋಗಿ ಜೀವ ಉಳಿಸಿಕೊಂಡಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದೆ.
  
ಬಾಗೇಪಲ್ಲಿ ಪೊಲೀಸ್ ಠಾಣೆ ಎದುರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ವಾಹನ ಸವಾರರಿಗೆ ಎಎಸ್‍ಐ ರಾಮಚಂದ್ರಪ್ಪ ದಂಡ ವಿಧಿಸುತ್ತಿದರು. ಈ ಸಂದರ್ಭದಲ್ಲಿ ಪಾತಪಾಳ್ಯ ಮೂಲದ ಕಾರು ಚಾಲಕ ರವಿ ಎಂಬಾತ ಸೀಟ್ ಬೆಲ್ಟ್ ಧರಿಸಿಲ್ಲ ಎಂದು ಅವರು ದಂಡ ವಿಧಿಸಿದ್ದರು.
  
ಸಾಕಷ್ಟು ಗಲಾಟೆ ಮಾಡಿ ನಂತರ ದಂಡ ಪಾವತಿಸಿದ ಕಾರು ಚಾಲಕ ರವಿ ವಿನಾಕಾರಣ ಪೊಲೀಸರ ಜೊತೆ ಕ್ಯಾತೆ ತೆಗೆದಿದ್ದಾನೆ. ಈ ವೇಳೆ ಕಾರು ಚಾಲಕನ ಜೊತೆಗೆ ಸ್ಥಳೀಯ ಕಿಡಿಗೇಡಿಗಳು ಗುಂಪುಗೂಡಿ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಲ್ಲೇ,  ಮಧ್ಯಪ್ರವೇಶಿಸಿದ ಗೃಹರಕ್ಷಕ ದಳ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ಭಯಭೀತಿಗೊಂಡ ಎಎಸ್‍ಐ ರಾಮಚಂದ್ರಪ್ಪ ಅಲ್ಲಿಯೇ ಹತ್ತಿರದಲ್ಲಿದ್ದ ಪೊಲೀಸ್ ಠಾಣೆಗೆ ಜೀವ ಭಯದಿಂದ ಓಡಿ ಹೋಗಿ ರಕ್ಷಿಸಿಕೊಂಡಿರುವ  ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿತ್ತು.
  
ಘಟನೆ ನಡೆದ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಕರ್ತವ್ಯ ನಿಮಿತ್ತ ಬೇರೆಡೆ ತೆರಳಿದರು. ಠಾಣೆ ಬಳಿಯೂ ಜಮಾಯಿಸಿದ ಕಿಡಿಗೇಡಿಗಳು ಪೊಲೀಸರ ವಿರುದ್ಧ ಬಾಯಿಗೆ ಬಂದಂತೆ ನಿಂದಿಸಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕ ರವಿ ಸೇರಿ ಇತರರ ವಿರುದ್ಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಕರ್ತವ್ಯಕ್ಕೆ ವಿನಾಕಾರಣ ಅಡ್ಡಿ ಪಡಿಸಿದ ಕಿಡಿಗೇಡಿಗಳ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

SCROLL FOR NEXT