ರಾಜ್ಯ

ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ: ಬಿ.ಸಿ. ಪಾಟೀಲ್

Srinivasamurthy VN

ಕೊಪ್ಪಳ: ರೈತರು ಬೆಳೆದ ತರಕಾರಿ, ಹಣ್ಣು ಹಾಗೂ ಇತರ ದವಸ ಧಾನ್ಯಗಳ ಮಾರಾಟ ಮತ್ತು ಅವುಗಳ ಸಾಗಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದರು.

ಅವರು ಗುರುವಾರದಂದು (ಏ.09) ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಕೋವಿಡ್-19 ಕುರಿತು ಜಿಲ್ಲಾಡಳಿತ ಕೈಗೊಂಡ ಕ್ರಮಗಳು, ಕೃಷಿ ಉತ್ಪನ್ನಗಳ ಸರಕು ಸಾಗಾಣಿಕೆ ಮತ್ತು ಬೀಜ ಗೊಬ್ಬರಗಳ ಸರಬರಾಜು ಹಾಗೂ ಇತರೆ  ಚಟುವಟಿಕೆಗಳ ಬಗ್ಗೆ ಸಭೆ ನಡೆಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸುತ್ತೋಲೆಯಂತೆ ರೈತರು ಬೆಳೆದ ಯಾವುದೇ ಬೆಳೆಗಳಿಗೆ ನಿರ್ಬಂಧವಿರುವುದಿಲ್ಲ.  ರೈತರು ತಮ್ಮ ಬೆಳೆಗಳನ್ನು ಯಾವುದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದಾಗಿದೆ. ರೈತರ  ಅನುಕೂಲಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆಗಳ ಮೇಲಿನ ನಿರ್ಬಂಧವನ್ನು ತೆಗೆಯಲಾಗಿದ್ದು, ರೈತರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತಾವು ಬೆಳೆದ ಫಸಲುಗಳನ್ನು ಮಾರಾಟ ಮಾಡಬಹುದಾಗಿದೆ ಎಂದರು.

ಪ್ರತಿಯೊಂದು ಕಾಲದಲ್ಲಿ ರೈತರು ಒಂದಿಲ್ಲೊಂದು ಸಮಸ್ಯೆಗಳ ಹೊಡೆತಕ್ಕೆ ಸಿಲುಕಿಕೊಳ್ಳುತಾರೆ.  ಈ ಹಿಂದೆ ಪ್ರಕೃತಿ ವಿಕೋಪ, ಬರಗಾಲ ಹಾಗೂ ಪ್ರಸ್ತುತ ಕೋವಿಡ್-19 ನಿಂದಾಗಿ ರೈತ ಬೆಳೆದ ಫಸಲುಗಳ ಮಾರಾಟಕ್ಕೆ ತೊಂದರೆಯಾಗುತ್ತಿದ್ದು, ಇದರ ನಿವಾರಣೆಗಾಗಿ ಸರ್ಕಾರವು ರೈತರ  ಅನುಕೂಲಕ್ಕಾಗಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದು, ರೈತರ ದೈನಂದಿನ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದರು. ಜಿಲ್ಲೆಯ ಗಂಗಾವತಿ, ಕಾರಟಗಿ ಮತ್ತು ಕೊಪ್ಪಳದ ಕೆಲವು  ಭಾಗಗಳಲ್ಲಿ ಮೊನ್ನೆ ಆಣಿಕಲ್ಲು ಮಳೆಯಿಂದಾಗಿ ಬಹಳ ದೊಡ್ಡ ಪ್ರಮಾಣದ ಭತ್ತದ ಬೆಳೆ ಹಾನಿಯಾಗಿದೆ. ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ರೈತರಿಗೆ ಅಪಾರ ಪ್ರಮಾಣದ ನಷ್ಟವಾಗಿದ್ದು, ಈ ಕುರಿತು ಕೂಡಲೇ ಜಿಲ್ಲಾಡಳಿತ ತಾಲ್ಲೂಕು ಮಟ್ಟದ ಅಧಿಕಾರಿಗಳ ವಿಶೇಷ  ಸಮಿತಿ ರಚಿಸಿ, ಹಾನಿಯಾದ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ, ಸಮೀಕ್ಷೆ ನಡೆಸಿ ಹಾನಿಯಾದ ಅಂದಾಜು ಮೊತ್ತದ ವರದಿಯನ್ನು ಸೋಮವಾರದೊಳಗೆ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ರೈತರಿಗೆ ಬೇಕಾಗುವ ಬೀಜ, ಗೊಬ್ಬರವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ರೈತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅವರಿಗೆ ಎಲ್ಲಾ ಅನುಕೂಲ ಮಾಡಿಕೊಡಲಾಗುವುದು.  ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಭತ್ತ ಕಟಾವಿಗೆ  ಬಂದಿದ್ದು, ಅವುಗಳ ಕಟಾವಿನ ಯಂತ್ರಗಳ ಮಾಲೀಕರು ತಮಗೆ ಬೇಕಾದ ರೀತಿಯಲ್ಲಿ ದರ ನಿಗದಿಪಡಿಸಿ ರೈತರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಕೂಡಲೇ ಭತ್ತದ ಕಟಾವು ದರವನ್ನು ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ  ಟೊಮೆಟೊ ಬೆಳೆಗಾರರು ತಮ್ಮ ಫಸಲನ್ನು ಕೆಚ್‌ಅಪ್ ಕಾರ್ಖಾನೆಗಳಿಗೆ ಮಾರಾಟ ಮಾಡಬಹುದು. ರಾಜ್ಯದಲ್ಲಿ ಸಾಧ್ಯವಾಗದಿದ್ದರೆ ಬೇರೆ ರಾಜ್ಯದ ಕಾರ್ಖಾನೆಗಳನ್ನು ಸಂಪರ್ಕಿಸಿ ಅವರಿಗೆ ನಮ್ಮ ಜಿಲ್ಲೆಯ ಟೊಮೆಟೊವನ್ನು ಮಾರಾಟ ಮಾಡಬಹುದು. ಕೇರಳ ಹೊರತು ಪಡಿಸಿ ಬೇರೆ  ರಾಜ್ಯಗಳ ಗಡಿಗಳಲ್ಲಿ ಕೃಷಿ, ತೋಟಗಾರಿಕೆ ಸೇರಿದಂತೆ ಅತ್ಯವಶ್ಯಕ ಸಾಮಗ್ರಿಗಳ ಸಾಗಾಟಕ್ಕೆ ವಿನಾಯಿತಿ ನೀಡಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಖರೀದಿಗಾರರ ಪಟ್ಟಿಯನ್ನು ಸಿದ್ಧಪಡಿಸಿ ರೈತರಿಗೆ ಹಾಗೂ ಜಿಲ್ಲೆಯಲ್ಲಿನ  ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಕುರಿತು ಖರೀದಿದಾರರಿಗೆ ಮಾಹಿತಿ ನೀಡಿದರೆ ಅವರಿಗೆ ಅನುಕೂಲವಾದೆಡೆ ಅಥವಾ ಅವಶ್ಯವಿದ್ದೆಡೆ ತಮ್ಮ ಕೃಷಿ ಉತ್ಪನ್ನವನ್ನು ಮಾರಾಟ ಮಾಡಬಹುದು ಎಂದರು.

ಫಸಲ್ ಬೀಮಾ, ಪಿಎಂಕೆವೈ ಮುಂತಾದ ಯೋಜನೆಗಳಲ್ಲಿ ರೈತರ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ. ಯಾವುದೇ ಬ್ಯಾಂಕುಗಳು ಆ ಹಣವನ್ನು ರೈತರ ಸಾಲಕ್ಕೆ ಖಡಿತಗೊಳಿಸುವಂತಿಲ್ಲ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿಸಿದ ಬ್ಯಾಂಕುಗಳ ವಿರುದ್ಧ ಕ್ರಮ  ಕೈಗೊಳ್ಳಲಾಗುವುದು ಎಂದು ಹೇಳಿದರು. ಕೋವಿಡ್ ನಿರ್ಮೂಲನೆಗೆ ಸಾಮಾಜಿಕ ಅಂತರವೇ ಒಳ್ಳೆಯ ಔಷಧಿಯಾಗಿದ್ದು, ನಮ್ಮಷ್ಟಕ್ಕೆ ನಾವೇ ನಿರ್ಬಂಧವನ್ನು ಹಾಕಿಕೊಳ್ಳುವ ಮೂಲಕ ಹಾಗೂ ಅನವಶ್ಯಕವಾಗಿ ಮನೆಗಳಿಂದ ಹೊರಬರದೇ ನಾವೆಲ್ಲರೂ ಸರ್ಕಾರದ ಸುತ್ತೋಲೆಗಳನ್ನು  ಪಾಲಿಸಿ ಈ ಸಾಂಕ್ರಾಮಿಕ ರೋಗ ನಿರ್ಮೂಲನೆ ಕೈಜೋಡಿಸಬೇಕಾಗಿದೆ ಎಂದರು. ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಮಾತನಾಡಿ, ರೈತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅವರು ಬೆಳೆದ ಬೆಳೆಗಳ ಮಾರಾಟಕ್ಕಾಗಿ ಪಾಸ್‌ಗಳನ್ನು ಕೊಡಲಾಗಿದೆ.  ಇದು ಕೇವಲ  ರೈತರಿಗೆ ಮಾತ್ರವಲ್ಲದೇ ಹಮಾಲರಿಗೂ ನೀಡಲಾಗಿದೆ.  ಅವರ ಹಣ್ಣು ಮತ್ತು ತರಕಾರಿಗಳ ಮಾರಾಟಕ್ಕಾಗಿ ಹಾಫ್‌ಕಾಮ್ಸ್ ಮಳಿಗೆಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಕಡಲೆ ಖರೀದಿಗೆ ಜಿಲ್ಲೆಯಾದ್ಯಂತ 13 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷ ಹೆಚ್. ವಿಶ್ವನಾಥರೆಡ್ಡಿ, ಸಂಸದ ಕರಡಿ ಸಂಗಣ್ಣ, ಶಾಸಕರಾದ ಅಮರೇಗೌಡ ಪಾಟೀಲ ಬಯ್ಯಾಪುರ, ಕೆ.ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್ ಹಾಗೂ ಬಸವರಾಜ ದಢೇಸೂಗೂರು, ರಾಜ್ಯ ಕೃಷಿ ಬೆಲೆ ಆಯೋಗದ  ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಅಪರ ಜಿಲ್ಲಾಧಿಕಾರಿ ಎಂ.ಪಿ ಮಾರುತಿ, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ಜಂಟಿ ಕೃಷಿ ನಿರ್ದೇಶಕಿ ಶಬಾನಾ ಎಂ. ಶೇಖ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ  ಉಕ್ಕುಂದ, ಡಿವೈಎಸ್‌ಪಿ ವೆಂಕಟಪ್ಪ ನಾಯಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್, ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

SCROLL FOR NEXT