ಬೆಂಗಳೂರು: ದೇಶಾದ್ಯಂತ ಮಾರಕವಾಗಿ ಹಬ್ಬುತ್ತಿರುವ ಕೊರೋನಾ ವೈರಸ್ ಹರಡುವಿಕೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಸೀಲ್ ಡೌನ್ ಕ್ರಮಕ್ಕೆ ಸಿಲಿಕಾನ್ ಸಿಟಿಯ ಮತ್ತೊಂದು ವಾರ್ಡ್ ಒಳಗಾಗುವ ಸಾಧ್ಯತೆ ನಿಚ್ಚಳವಾಗಿದೆ.
ಮಾಧ್ಯಮವೊಂದು ವರದಿ ಮಾಡಿರುವಂತೆ ಈಗಾಗಲೇ ನಗರದ ಬಾಪೂಜಿನಗರ ಮತ್ತು ಪಾದರಾಯನ ಪುರ ವಾರ್ಡ್ ಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಪಾದರಾಯನಪುರಕ್ಕೆ ಅಂಟಿಕೊಂಡಿರುವ ಜೆಜೆ ನಗರ ವಾರ್ಡ್ ಅನ್ನೂ ಕೂಡ ಸೀಲ್ ಡೌನ್ ಮಾಡುವ ಕುರಿತು ಸರ್ಕಾರ ಗಂಭೀರ ಚಿಂತನೆಯಲ್ಲಿದೆ. ಈ ಕುರಿತಂತೆ ಡಿಸಿಎಂ ಅಶ್ವಥ್ ನಾರಾಯಣ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕೊರೋನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರಿನ ಎರಡು ವಾರ್ಡ್ ಗಳನ್ನು ಮಾತ್ರ ಸೀಲ್‍ಡೌನ್ ಮಾಡಲಾಗಿತ್ತು. ಇದೀಗ ಮತ್ತೊಂದು ಏರಿಯಾವನ್ನು ಸೀಲ್‍ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
'ಸೋಂಕು ಪೀಡಿತ ಪ್ರದೇಶ ಹಾಟ್‍ಸ್ಪಾಟ್‍ನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಕಠಿಣ ಲಾಕ್‍ಡೌನ್‍ಗೆ ನಿರ್ಧರಿಸಿದ್ದೇವೆ. ಇನ್ನೆರಡು ದಿನದಲ್ಲಿ ನಿಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ನೋಡಿದರೆ ಕಡಿಮೆ ಇದೆ. ಹೀಗಾಗಿ ಬೆಂಗಳೂರು ಉತ್ತಮವಾಗಿ ನಿರ್ಮಾಣವಾಗಿದೆ. ಕೆಲವು ಹಾಟ್‍ಸ್ಟಾಟ್‍ಗಳಿವೆ, ಅಂತಹ ಹಾಟ್‍ಸ್ಟಾಟ್ ಸ್ಥಳಗಳನ್ನು ಯಾವ ರೀತಿ ನಿರ್ಬಂಧನೆ ಮಾಡಬೇಕು. ಇನ್ನೂ ತೀವ್ರವಾದ ಕ್ರಮವನ್ನು ವಹಿಸಬೇಕುಎಂದು ನಿರ್ಧರಿಸಿದ್ದೇವೆ. ಅದೇ ರೀತಿ ಪಾದರಾಯನಪುರ ಮತ್ತು ಬಾಪೂಜಿನಗರವನ್ನು ಸೀಲ್‍ಡೌನ್ ಮಾಡಲಾಗಿದೆ. ಈಗ ಜೆಜೆ ನಗರವನ್ನು ಸೀಲ್‍ಡೌನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಶ್ವಥ್ ನಾರಾಯಣ್ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಇಂದು ಮತ್ತೆ 07 ಹೊಸ ಕೊರೋನಾ ಪ್ರಕರಣಗಳ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 214ಕ್ಕೆ ಏರಿಕೆಯಾಗಿದೆ. ಇಂದು ಪತ್ತೆಯಾದ ಏಳು ಪ್ರಕರಣಗಳಲ್ಲಿ ಮೈಸೂರಿನ ನಂಜನಗೂಡಿನ ಕಾರ್ಖಾನೆಯ ಐವರು ಕಾರ್ಮಿಕರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನೂ ಬೆಂಗಳೂರು ಮತ್ತು ಬೀದರಿನಲ್ಲಿ ತಲಾ ಒಂದು ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಈಗಾಗಲೇ ಜೆಜೆನಗರ ಸಂಪೂರ್ಣ ಸ್ಥಬ್ಧ
ಇನ್ನು ಅತ್ತ ಪಕ್ಕದ ಪಾದರಾಯನಪುರ ವಾರ್ಡ್ ಅನ್ನು ಸೀಲ್ ಡೌನ್ ಮಾಡಿದ ಬೆನ್ನಲ್ಲೇ ಇತ್ತ ಜೆಜೆ ನಗರ ಕೂಡ ಸಂಪೂರ್ಣ ಸ್ಥಬ್ಧವಾಗಿದೆ. ಜೆಜೆ ನಗರ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ಜೆಜೆನಗರ ಸಂಪರ್ಕಿಸುವ ಎಲ್ಲ ರಸ್ತೆಗಳನ್ನೂ ಬಂದ್ ಮಾಡಿದ್ದಾರೆ. ಮುಖ್ಯರಸ್ತೆ ಮಾತ್ರವಲ್ಲದೇ ಅಡ್ಡರಸ್ತೆಗಳಲ್ಲೂ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿದ್ದು, ಎಲ್ಲ ರೀತಿಯ ಜನ ಸಂಚಾರವನ್ನು ಸಂಪೂರ್ಣ ನಿಯಂತ್ರಿಸಿದ್ದಾರೆ ಎನ್ನಲಾಗಿದೆ.