ಮೈಸೂರು: ಗೋವಾ, ಆಸ್ಟ್ರೇಲಿಯಾದಿಂದ ಬಂದವರಿಂದ ಔಷಧಿ ಕಂಪನಿಯ ಸಿಬ್ಬಂದಿಗಳಿಗೆ ಸೋಂಕು?
ನಂಜನಗೂಡಿನ ಜುಬಿಲಿಯಂಟ್ ಔಷಧಿ ಕಂಪನಿಯ ಮೊದಲ ಸೋಂಕಿತ ವ್ಯಕ್ತಿಯು ಸಂಪೂರ್ಣವಾಗಿ ಗುಣಮುಖನಾಗಿದ್ದು, ಇದೀಗ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ, ಈ ಪ್ರಕರಣದಿಂದಾಗಿ 10 ಮಂದಿಯಲ್ಲಿಯೂ ಕೂಡ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಸೋಂಕು ಹರಡಿರುವ ಕುರಿತ ತನಿಖೆಯನ್ನು ಅಧಿಕಾರಿಗಳು ಮುಂದುವರೆಸಿದ್ದಾರೆ.
ಮೈಸೂರು: ನಂಜನಗೂಡಿನ ಜುಬಿಲಿಯಂಟ್ ಔಷಧಿ ಕಂಪನಿಯ ಮೊದಲ ಸೋಂಕಿತ ವ್ಯಕ್ತಿಯು ಸಂಪೂರ್ಣವಾಗಿ ಗುಣಮುಖನಾಗಿದ್ದು, ಇದೀಗ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ, ಈ ಪ್ರಕರಣದಿಂದಾಗಿ 10 ಮಂದಿಯಲ್ಲಿಯೂ ಕೂಡ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಸೋಂಕು ಹರಡಿರುವ ಕುರಿತ ತನಿಖೆಯನ್ನು ಅಧಿಕಾರಿಗಳು ಮುಂದುವರೆಸಿದ್ದಾರೆ.
ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 36 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಆದರೆ, ಸೋಂಕಿನ ಮೂಲಕ ಪತ್ತೆ ಹಚ್ಚಲು ಜಿಲ್ಲಾ ಆಡಳಿತ ಮಂಡಳಿ ಹಾಗೂ ಆರೋಗ್ಯ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ, ಯಾವುದೇ ಪ್ರಯಾಣ ಮಾಡದಿದ್ದರೂ ಮಾರ್ಚ್ 26 ರಂದು ವ್ಯಕ್ತಿಯೊಬ್ಬರಲ್ಲಿ ವೈರಸ್ ದೃಢಪಟ್ಟಿತ್ತು. ಈ ಪ್ರಕರಣ ಇಡೀ ಮೈಸೂರು ಜನತೆಯನ್ನು ಬೆಚ್ಚಿಬೀಳಿಸಿತ್ತು. ಪ್ರಕರಣ ಬೆಳಕಿಗೆ ಬಂದು 18 ದಿನಗಳು ಕಳೆದಿದ್ದರೂ ಪ್ರಕರಣದ ಮೂಲ ಮಾತ್ರ ಅಧಿಕಾರಿಗಳಿಗೆ ತಿಳಿಯುತ್ತಿಲ್ಲ. ಈ ಹಿಂದೆ ಚೀನಾದಿಂದ ವೈರಸ್ ಹರಡಿರಬಹುದು ಎಂದು ಹೇಳಲಾಗುತ್ತಿತ್ತು. ಈ ಕುರಿತ ತನಿಖೆ ಕೂಡ ಮುಂದುವರೆದಿದೆ.
ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳೂ ಕೂಡ ತನಿಖೆ ನಡೆಸುತ್ತಿದ್ದು, ಈ ತನಿಖೆ ಅಂತಿಮ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದು, ಔಷಧಿ ಕಂಪನಿಗೆ ಬಂದಿರುವ ಎಲ್ಲಾ ಭೇಟಿಕಾರರ ಚಟುವಟಿಕೆಗಳನ್ನು ಗಮನಿಸಿದ್ದಾರೆ.
ಔಷಧಿ ಕಂಪನಿಗೆ ಭೇಟಿ ಕೊಟ್ಟಿದ್ದ ಎಲ್ಲಾ ಕಂಪನಿಗಳಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ವರದಿಗಳನ್ನು ಕೇಳಲಾಗಿದೆ. ಗೋವಾ ಹಾಗೂ ಆಸ್ಟ್ರೇಲಿಯಾ ಕಂಪನಿಗಳಿಂದಲೂ ವರದಿ ಕೇಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣದ ತನಿಖೆ ಹೊಸ ಆಯಾಮವನ್ನು ಪಡೆದುಕೊಂಡಿದೆ. ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆ,ಸಲಾಗುತ್ತಿದೆ. ತನಿಖೆಗೆ ಮತ್ತಷ್ಟು ಸಮಯ ತೆಗೆದುಕೊಳ್ಳಲಿದೆ ಎಂದಿದ್ದಾರೆ.
ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದವರೆಲ್ಲರನ್ನೂ ಪರೀಕ್ಷೆಗೊಳಪಡಿಸಲಾಗಿದೆ. ಪರೀಕ್ಷಾ ಹಂತವನ್ನು ಈಗಾಗಲೇ ಪೂರ್ಣಗೊಂಡಿದೆ. ಇದಕ್ಕಾಗಿ 7 ತಂಡಗಳು ಕಾರ್ಯನಿರ್ವಹಿಸುತ್ತಿವೆ. ಮೈಸೂರಿನಲ್ಲಿ 3,506 ಮಂದಿಯ ಮೇಲೆ ನಿಗಾ ವಹಿಸಲಾಗಿದೆ. 1,483 ಮಂದಿ ಐಸೋಲೇಷನ್ ನಲ್ಲಿದ್ದಾರೆ, 781 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ 734 ಮಂದಿಯಲ್ಲಿ ವೈರಸ್ ದೃಢಪಟ್ಟಿಲ್ಲ ಎಂದು ಹೇಳಿದ್ದಾರೆ.