ಚಾಮರಾಜನಗರ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ ಸದ್ಯಕ್ಕೆ ರಾಜ್ಯದಲ್ಲಿ ಚಾಮರಾಜನಗರವೂ ಸೇರಿದಂತೆ 9 ಜಿಲ್ಲೆಗಳು ಕೊರೊನಾ ಮುಕ್ತವಾಗಿವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟದ ಸೋಲಿಗರ ಹಾಡಿಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದ ಅವರು, 'ಅತ್ಯಂತ ಸಮಾಧಾನಕರ ಸಂಗತಿ ಎಂದರೆ, ರಾಜ್ಯದ ಕೊರೊನಾ ಮುಕ್ತ ಜಿಲ್ಲೆಗಳಲ್ಲಿ ಚಾಮರಾಜನಗರವೂ ಒಂದು. ಪಕ್ಕದಲ್ಲೇ ಮೈಸೂರು, ನಂಜನಗೂಡು, ಮಂಡ್ಯ ಹಾಗೂ ಕೇರಳ ಇದ್ದರೂ ಇಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತೆಗೆದುಕೊಂಡಿರುವ ಕ್ರಮಗಳು ಸೋಂಕು ನಿಯಂತ್ರಣಕ್ಕೆ ಸಹಕಾರಿಯಾಗಿವೆ. ಕೊರೋನಾ ಸೋಂಕಿನ ಪ್ರಗತಿ ದರದಲ್ಲಿ ರಾಜ್ಯ 19ನೇ ಸ್ಥಾನದಲ್ಲಿದೆ. ದೇಶದಲ್ಲಿ ಸರಾಸರಿ ಶೇ.19 ಮತ್ತು . ರಾಜ್ಯದ್ದು ಶೇ 6. ಪ್ರಕರಣಗಳ ಆಧಾರದ ಮೇಲೆ ರಾಜ್ಯವು 11ನೇ ಸ್ಥಾನದಲ್ಲಿದೆ. 9 ಜಿಲ್ಲೆಗಳು ಕೊರೊನಾ ಮುಕ್ತವಾಗಿವೆ. ಗುಣಮುಖರಾಗುತ್ತಿರುವವರ ಸಂಖ್ಯೆ ಒಳ್ಳೆಯ ಪ್ರಮಾಣದಲ್ಲಿದೆ. ರಾಜ್ಯ ಮಾಡುತ್ತಿರುವ ಕೆಲಸಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಇನ್ನು ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಿಸಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಶಾಸಕರ ಜೊತೆಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಶೀಲನೆ ನಡೆಸಲಾಗಿದೆ. ಕೃಷಿ, ತೋಟಗಾರಿಕೆ, ಕಂದಾಯ, ಪಂಚಾಯತ್ ರಾಜ್, ಪಶುಸಂಗೋಪನೆ ಅಧಿಕಾರಿಗಳಿಂದ ಮಾಹಿತಿ ತೆಗೆದುಕೊಂಡಿದ್ದೇನೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಬಹುದಾದ ಗ್ರಾಮಗಳನ್ನು ಪಟ್ಟಿ ಮಾಡಲಾಗಿದ್ದು, ಅಲ್ಲಿ ಅಗತ್ಯ ಕ್ರಮಗಳನ್ನು ಸೂಚಿಸಲಾಗಿದೆ. ನಗರ ಪ‍್ರದೇಶದಲ್ಲಿ ಶುದ್ಧ ನೀರಿನ ಘಟಕಗಳು ಹಾಳಾಗಿದ್ದರೆ, ಅವುಗಳನ್ನು ದುರಸ್ತಿ ಮಾಡಬೇಕು ಎಂದು ಹೇಳಿದ್ದೇನೆ' ಎಂದು ಹೇಳಿದರು.
ಇದೇ ವೇಳೆ ಜಿಲ್ಲೆಯಲ್ಲಿ ಕೊರೋನಾ ನಿರ್ವಹಣೆ ಕುರಿತು ಮಾತನಾಡಿದ ಅವರು, 'ಜಿಲ್ಲೆಯಲ್ಲಿ ಇದುವರೆಗೆ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಸಾಕಷ್ಟು ಮೇವು ದಾಸ್ತಾನು ಮಾಡಲಾಗಿದೆ. ಆಹಾರ ವಿತರಣೆಗೂ ಮಾಡುವ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ. ಮುಂಗಾರು ಪೂರ್ವ ಮಳೆ ಬಂದು ಕೃಷಿ ಚಟುವಟಿಕೆ ಆರಂಭವಾಗಿರುವುದರಿಂದ ಆ ಬಗ್ಗೆ ವಿಶೇಷ ಚರ್ಚೆ ಮಾಡಲಾಗಿದ್ದು, ಕೊಳ್ಳೇಗಾಲ, ಹನೂರು ಭಾಗದಲ್ಲಿ ಯೂರಿಯಾ ಕೊರತೆ ಇರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಸರಬರಾಜು ಮಾಡುವುದಕ್ಕಾಗಿ ಸಂಬಂಧಿಸಿದ ಇಲಾಖೆ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅಂತರರಾಜ್ಯ, ಅಂತರಜಿಲ್ಲೆ ಸಂಚಾರ ನಿರ್ಬಂಧ ಮುಂದುವರಿಕೆ
'ಕೊರೊನಾ ದಿಗ್ಬಂಧನದ ಕಾರಣಕ್ಕೆ ಏಪ್ರಿಲ್ 30ರವರೆಗೂ ಅಂತರರಾಜ್ಯ, ಅಂತರಜಿಲ್ಲೆ ಸಂಚಾರ ನಿರ್ಬಂಧ ಮುಂದುವರಿಯುವುದು ಖಚಿತ ಎಂದು ಹೇಳಿದ ಸಚಿವರು, ಕೊರೊನಾ ಮುಕ್ತ ಜಿಲ್ಲೆಗಳಲ್ಲಿ ಆರ್ಥಿಕ ಸ್ಥಿತಿಗೆ ಚೈತನ್ಯ ನೀಡುವ ಕೆಲವು ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಅವಕಾಶ ನೀಡುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನಡೆಸಿದ ವಿಡಿಯೊ ಕಾನ್ಫರೆನ್ಸ್‌ನಲ್ಲಿ, ಇದೇ 30ರವರೆಗೆ ಲಾಕ್‌ಡೌನ್ ಮುಂದುವರಿಯಬೇಕು. ಅಂತರಜಿಲ್ಲೆ, ಅಂತರರಾಜ್ಯ ಪ್ರಯಾಣಕ್ಕೆ ಅವಕಾಶ ಕೊಡಬಾರದು. ತೊಂದರೆ ಇಲ್ಲದ ಜಿಲ್ಲೆಗಳಲ್ಲಿ ಕೆಲವು ಚಟುವಟಿಕೆಗಳಿಗೆ ಅವಕಾಶ ಕೊಡಬೇಕು ಎಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಸಲಹೆ ನೀಡಿದ್ದಾರೆ. .
ವಾರದ ಹಿಂದೆ ಜಿಲ್ಲೆಗೆ ಬಂದಿದ್ದಾಗ ರೈತರು, ಪಂಪ್ ಸೆಟ್ ರಿಪೇರಿ ಸೇರಿದಂತೆ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಪೂರಕವಾದ ಅಂಗಡಿಗಳನ್ನು ತೆರೆಯಲು ಮನವಿ ಮಾಡಿದ್ದರು. ಜಿಲ್ಲಾಡಳಿತ ಈಗ ಅನುಮತಿ ಕೊಟ್ಟಿದ್ದು ಅಂಗಡಿಗಳು ತೆರೆದಿವೆ. ಜಿಲ್ಲೆಯ ಅಂತರ್ಜಲ ಪರಿಸ್ಥಿತಿ ಬಗ್ಗೆಯೂ ಚರ್ಚೆ ನಡೆಸಲಾಗಿದ್ದು, ಚೆಕ್ ಡ್ಯಾಂ ನಿರ್ಮಾಣ ಸೇರಿದಂತೆ ಅಂತರ್ಜಲ ಮರುಪೂರ್ಣ ಮಾಡಲು ಕೈಗೊಂಡಿರುವ ಕ್ರಮ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಕಳೆದ ವರ್ಷ ಉತ್ತಮ ಮಳೆಯಾದ ಕಾರಣಕ್ಕೆ ಹಾಗೂ ಕೆರೆಗಳನ್ನು ತುಂಬಿಸಿದ್ದರಿಂದ ಗುಂಡ್ಲುಪೇಟೆ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಪೂರ್ಣ ಮಾಹಿತಿ ಕೇಳಿದ್ದೇನೆ. ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಬಡವರಿಗೆ ಉಚಿತವಾಗಿ ಹಾಲು ನೀಡಲಾಗುತ್ತಿದೆ. ಜಿಲ್ಲೆಯ ಆದಿವಾಸಿಗಳಿಗಳೂ ನೀಡಬೇಕು ಎಂಬ ಒತ್ತಾಯ ಇತ್ತು. ಶೀಘ್ರದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯಾದ್ಯಂತ 2.5 ಲಕ್ಷ ಮಂದಿ ಬಿಪಿಎಲ್ ಪಡಿತರ ಕಾರ್ಡ್ ಗೆ ಅರ್ಜಿ ಹಾಕಿದ್ದಾರೆ. ಅವರಿಗೂ ಉಚಿತ ಪಡಿತರ ನೀಡಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ. ಅದನ್ನು ಜಿಲ್ಲೆಯಲ್ಲೂ ಜಾರಿ ಮಾಡಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.