ಹೊಸಪೇಟೆ: ಕೊರೋನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಗೂಡ್ಸ್ ವಾಹನ ಸಂಚಾರ ಮುಕ್ತ ಅವಕಾಶ ನೀಡಿದೆ. ಆದರೆ ಸರ್ಕಾರ ನೀಡಿರುವ ಈ ಅವಕಾಶವನ್ನು ಕೆಲ ಚಾಲಕರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಹೌದು.. ಸರ್ಕಾರ ಗೂಡ್ಸ್ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದ್ದು, ಇದನ್ನು ಕೆಲ ಚಾಲಕರು ದುರುಪಯೋಗ ಪಡಿಸಿಕೊಂಡು ಜನಗಳ ಕಳ್ಳ ಸಾಗಣೆ ಮಾಡುತ್ತಿದ್ದಾರೆ. ಬಳ್ಳಾರಿಯಲ್ಲಿ ಇಂತಹುದೊಂದು ಘಟನೆ ಇದೀಗ ಬೆಳಕಿಗೆ ಬಂದಿದ್ದು, ಹೊಸಪೇಟೆ ಮಾರ್ಗವಾಗಿ ದೇವದುರ್ಗಾಕ್ಕೆ ತೆರಳುತಿದ್ದ ಲಾರಿಯನ್ನು ಪೊಲೀಸರು ತಡೆದು ಪರಿಶೀಲನೆ ನಡೆಸಿದಾಗ ಲಾರಿಯಲ್ಲಿ ಸಾಕಷ್ಟು ಜನರು ಇದ್ದದು ಕಂಡುಬಂದಿದೆ.
ಬೆಂಗಳೂರಿನ ನೆಲಂಮಗಲದಿಂದ ರಾಯಚೂರು ದೇವದುರ್ಗಕ್ಕೆ ಕೂಲಿ ಕಾರ್ಮಿಕರನ್ನು ಚಾಲಕ ಕರೆದೊಯ್ಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಹೊಸಪೇಟೆ ಡಿ.ವೈಎಸ್ಪಿ ರಘುಕುಮಾರ್ ಅವರು, ಲಾಕ್ ಡೌನ್ ನಿಮಿತ್ತ ಲಾರಿಗಳನ್ನು ಪರಿಶೀಲನೆ ಮಾಡಲಾಗುತ್ತಿತ್ತು. ಈ ವೇಳೆ ಬೆಂಗಳೂರು ಮೂಲದ 407ಗಾಡಿಯಲ್ಲಿ ಜನಗಳ ಕಳ್ಳಸಾಗಾಣಿಕೆ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ಜನಗಳು ಕಾಣದಂತೆ ಲಾರಿಯ ಮೇಲ್ಬಾಗಕ್ಕೆ ಟಾರ್ಪಲೀನ್ ಮುಚ್ಚಲಾಗಿತ್ತು. ಅಂತೆಯೇ ಲಾರಿಯಲ್ಲಿದ್ದ ಕೆಲವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಲಾರಿಯಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಜನರನ್ನು ಪೊಲೀಸರು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಲಾರಿಯೊಂದು ಜನರನ್ನು ಹೊತ್ತು ಬೆಂಗಳೂರಿನಿಂದ ಬಳ್ಳಾರಿ ವರೆಗೂ ಬಂದಿದ್ದು, ನೆಲಂಮಗಲದಿಂದ ಹೊಸಪೇಟೆ ನಗರದವರೆಗೆ ಇರುವ ಯಾವೊಂದು ಚಕ್ ಪೊಸ್ಟ್ ಗಳಲ್ಲೂ ತಪಾಸಣೆ ನಡೆಸದೆ ಇರುವುದು ದುರಂತದ ವಿಚಾರ.